

ರಾಮನಗರ : ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಸಂಬಂಧ ಕಾಯ್ದೆ ರೂಪಿಸಿ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಕಾರ್ಯಕರ್ತರು ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸೋಮವಾರ ಪ್ರತಿಭಟಿಸಿದರು.
ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946ರ ಅನ್ವಯ ರಾಜ್ಯಸರ್ಕಾರ ಬಲಿಷ್ಠವಾದ ಕಾನೂನು ರೂಪಿಸಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಬೇಕೆಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
15 ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದವರನ್ನು ಕನ್ನಡಿಗರೆಂದು ಪರಿಗಣಿಸುವ ನಿಯಮವಿದೆ. ಇವರಿಗೆ ಕಡ್ಡಾಯವಾಗಿ ಕನ್ನಡ ಬರವಣಿಗೆಯ ಪರೀಕ್ಷೆ ನೀಡಿ, ಅದರಲ್ಲಿ ಉತ್ತೀರ್ಣರಾದವರನ್ನು ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು. ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ನೀಡಿರುವ ಮಾನ್ಯತೆ ರದ್ದುಗೊಳಿಸಿ ಅವುಗಳಿಗೆ ಭೂಮಿ ನೀಡಲಾಗಿದ್ದರೆ ಹಿಂದಕ್ಕೆ ಪಡೆಯುವ ಮತ್ತು ಆ ಸಂಸ್ಥೆಗಳಿಗೆ ನೀಡಿರುವ ಎಲ್ಲ ಸೌಲಭ್ಯ ಹಿಂದಕ್ಕೆ ಪಡೆಯುವ ನಿಯಮ ರೂಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಲ್ಲ ಖಾಸಗಿ ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ.100 ಹುದ್ದೆಗಳು ಕನ್ನಡಿಗರಿಗೆ ಮೀಸಲಿಡಬೇಕು. ಇತರ ಹುದ್ದೆಗಳಲ್ಲಿ ಶೇ.80 ಕನ್ನಡಿಗರಿಗೆ ಮೀಸಲಿಡಬೇಕು. ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ ನೀಡಬೇಕು. ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ. 100 ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ, ಕೇಂದ್ರ ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶವನ್ನು ಉದ್ದೇಶಿತ ಕಾನೂನಿನಲ್ಲಿ ಅಳವಡಿಸಬೇಕು. ರಾಜ್ಯ ಸರ್ಕಾರ ರೂಪಿಸುವ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು. ಮುಂದೆ ಕಾನೂನು ಸಮಸ್ಯೆ ಎದುರಾದರೆ ಅದನ್ನು ಎದುರಿಸಲು ಸಮರ್ಥ ವಕೀಲರ ತಂಡವನ್ನು ಸಿದ್ಧಪಡಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ವಾಡೆದೊಡ್ಡಿ ಕಬ್ಬಾಳೇಗೌಡ ಮಾತನಾಡಿ, ಕರ್ನಾಟಕ ದೇಶದಲ್ಲಿಯೇ ಅತಿ ಹೆಚ್ಚು ಭೌಗೋಳಿಕ ಸಂಪನ್ಮೂಲ ಹೊಂದಿರುವ ರಾಜ್ಯ. ಹೀಗಾಗಿಯೇ ಇತರ ರಾಜ್ಯಗಳಿಂದ ದೊಡ್ಡ ಪ್ರಮಾಣದ ವಲಸೆ ನಡೆದುಕೊಂಡು ಬಂದಿದೆ. ಎರಡು, ಮೂರು ದಶಕಗಳಲ್ಲಿ ಅದು ತಾರಕಕ್ಕೇರಿದೆ ಎಂದರು.
ವಲಸಿಗರಿಂದ ಕನ್ನಡಿಗರ ಮೇಲೆ ದುಷ್ಪರಿಣಾಮ : ಈ ವಲಸೆಯಿಂದ ಕನ್ನಡಿಗರಿಗೆ ಉದ್ಯೋಗ ಇಲ್ಲದಂತಾಗಿದೆ. ಕನ್ನಡ ನೆಲದಲ್ಲಿ ಸ್ಥಾಪಿತವಾಗಿರುವ ಖಾಸಗಿ ಸಂಸ್ಥೆಗಳು ಹೊರ ರಾಜ್ಯಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನೇ ನೇಮಿಸಿಕೊಳ್ಳುತ್ತಿವೆ. ಅವರು ಆಯಾ ರಾಜ್ಯದ ಯುವಕರಿಗೆ ಕೆಲಸ ಕೊಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಮಾಣ ದಿನೇದಿನೆ ಕುಸಿಯುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕನ್ನಡಿಗರು ತಮ್ಮ ನೆಲದಲ್ಲಿ ತಾವೇ ಅತಂತ್ರರಾಗಿ ನರಕಯಾತನೆ ಅನುಭವಿಸುವ ಸ್ಥಿತಿ ಬಂದೊದಗಲಿದೆ ಎಂದು ಕಬ್ಬಾಳೇಗೌಡ ಆತಂಕ ವ್ಯಕ್ತಪಡಿಸಿದರು.
ಪ್ರತ್ಯೇಕ ಕಾನೂನು ರೂಪಿಸಿ: ರಾಜ್ಯ ಸರ್ಕಾರ ಡಾ. ಸರೋಜಿನಿ ಮಹಿಷಿ ವರದಿಯನ್ನು ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಇದರಲ್ಲಿ ಜಾರಿ ಮಾಡಿದ ಕೆಲ ಅಂಶಗಳನ್ನು ಖಾಸಗಿ ಸಂಸ್ಥೆಗಳು ಗಾಳಿಗೆ ತೂರಿವೆ. ಕೇಂದ್ರ ಸರ್ಕಾರದ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946ರ ಪ್ರಕಾರ ಆಯಾ ರಾಜ್ಯಗಳಲ್ಲಿ ನಿಯಮಾವಳಿ ರೂಪಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇರುತ್ತದೆ. ರಾಜ್ಯಸರ್ಕಾರವು ರೂಪಿಸುವ ಕಾನೂನನ್ನು 50ಕ್ಕೂ ಹೆಚ್ಚು ಮಂದಿ ನೌಕರರನ್ನು ಹೊಂದಿರುವ ಕೈಗಾರಿಕೆ ಪಾಲಿಸಬೇಕಾಗುತ್ತದೆ. ಈ ಕಾಯ್ದೆಯಡಿ ರಾಜ್ಯಸರ್ಕಾರ ಪ್ರತ್ಯೇಕ ಕಾನೂನನ್ನು ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿ ಮಾಡಬಹುದಾಗಿದೆ. ಇದಕ್ಕೆ ರಾಜ್ಯಸರ್ಕಾರ ಇಚ್ಛಾಶಕ್ತಿ ತೋರಬೇಕು ಎಂದು ಕಬ್ಬಾಳೇಗೌಡ ತಿಳಿಸಿದರು.
ರಾಮನಗರ ತಾಲೂಕು ಅಧ್ಯಕ್ಷ ಟಿ. ಆರ್. ದೇವರಾಜು, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಕೆ.ಆರ್ ಶ್ರೀನಿವಾಸ್, ಜಿಲ್ಲಾ ರೈತ ಘಟಕ ಅಧ್ಯಕ್ಷ ಶಂಭೂಗೌಡ, ಮುಖಂಡರಾದ ಜಗದೀಶ್, ಕೆ.ಎಂ ನಾಗರಾಜ್, ನೀಲಿ ರಮೇಶ್, ಗೋವಿಂದರಾಜು, ಮಹೇಶ್ ಬಾಬು, ಭೀಮಲಿಂಗೇಗೌಡ ಇದ್ದರು.