ಸಂಘಟಿತರಾದರೆ ಮೀಸಲಾತಿ ಲಭಿಸಲು ಸಾಧ್ಯ

62
Published on

ಹರಿಹರ: ಮೀಸಲಾತಿ ಹೋರಾಟದ ಹೆಸರಲ್ಲಿ ನಾಯಕರ ಪರಸ್ಪರ ಕೇಸರೆರಚಾಟ ದುರಾದೃಷ್ಟಕರ ಸಂಗತಿ ಎಂದು ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ್ ಬೇಸರ ವ್ಯಕ್ತಪಡಿಸಿದರು.

ಹರಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಪಂಚಮಸಾಲಿ ಸಂಘದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿರುವ ಭಿನ್ನಾಭಿಪ್ರಾಯದ ಲಾಭವನ್ನು ಬೇರೆಯವರು ಪಡೆದುಕೊಳ್ಳುವ ಮುಂಚೆ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಾವ್ಯಾರು ಶಾಶ್ವತವಲ್ಲ, ಸಮಾಜ ಶಾಶ್ವತ ಎನ್ನುವುದನ್ನು ಯಾರು ಮರೆಯಬಾರದು ಎಂದರು.

ಪೀಠಗಳು ಒಂದಲ್ಲ, ಹತ್ತಾಗಲಿ ಬೇಸರವಿಲ್ಲ. ಆದರೆ, ಒಗ್ಗಾಟ್ಟಾಗಿರಬೇಕು ಎಂದ ಅವರು, ಹರಿಯಾಣ ರಾಜ್ಯದಲ್ಲಿ ಜಾಟ್ ಸಮುದಾಯದವರು ಸರ್ಕಾರವನ್ನೇ ನಡುಗಿಸುತ್ತಾರೆ. ಆದರೆ, ಇಲ್ಲಿ ನಾವು ನಮ್ಮವರನ್ನೇ ಕಂಡರೆ ನಡುಗುವ ಪರಿಸ್ಥಿತಿ ಇದೆ ಎನ್ನುವ ಮೂಲಕ ಕಾಲೆಳೆಯುವ ಸಂಸ್ಕೃತಿಯನ್ನು ಬೀಡಬೇಕೆಂದು ತೀಕ್ಷ್ಮಣವಾಗಿ ಹೇಳಿದರು.

ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ರಾಜ್ಯದಲ್ಲಿ ಬಹುದೊಡ್ಡ ಸಮಾಜವಾಗಿದ್ದರೂ ಹೊಂದಾಣಿಕೆ ಕೊರತೆಯಿಂದ ಎಲ್ಲಾದರಲ್ಲೂ ಹಿಂದುಳಿದಿದ್ದೇವೆ. ನೂತನ ರಾಜ್ಯಾಧ್ಯಕ್ಷರು 24/7 ರೀತಿಯಲ್ಲಿ ಸಮಾಜದ ಸಂಘಟನೆ ಮಾಡಬೇಕು. ಅದಕ್ಕೆ ಬೇಕಾದ ಸಹಕಾರ ನಾನು ನೀಡುತ್ತೇನೆ ಎಂದರು.

ನೂತನ ಅಧ್ಯಕ್ಷ ಸೋಮನಗೌಡ ಎಂ.ಪಾಟೀಲ್ ಮಾತನಾಡಿ, ನಾನು ಪೀಠಗಳನ್ನು ಒಂದು ಮಾಡಲು ಹೋರಾಟ ಮಾಡಲ್ಲ. ಬದಲಾಗಿ ಸಮಾಜವನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ರಾಜ್ಯದಲ್ಲಿ 80 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಪಂಚಮಸಾಲಿಗಳು ಕೇವಲ 13300 ಜನ ಮಾತ್ರ ಸಂಘದ ಸದಸ್ಯತ್ವ ಪಡೆದಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ 1 ಲಕ್ಷ ಸದಸ್ಯತ್ವ ಮಾಡಿಸುವ ಸಂಕಲ್ಪ ಮಾಡಿದ್ದು, ನಿಮ್ಮೆಲ್ಲರ ಸಹಕಾರ ಕೊರುತ್ತೇನೆ ಎಂದರು.

ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಮಾತನಾಡಿ, ಎಷ್ಟೇ ಪೀಠಗಲಾಲಿ, ಎಲ್ಲರೂ ಚೆನ್ನಮ್ಮನ ಮಡಿಲಿಗೆ ಬರಲೇಬೇಕು ಎಂದರು.

ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಸಮಾಜದ ಸಂಘಟನೆ ಅವಶ್ಯಕತೆಯಿದೆ ಎಂದರು.

ಇದೇ ವೇಳೆ ರಾಜ್ಯ ಸಂಘದ ಮಾಜಿ ಅಧ್ಯಕ್ಷ ಬಸವರಾಜ್ ದಿಂಡೂರು ನೂತನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗೆ ಪ್ರಮಾಣವಚನ ಬೋಧಿಸುವ ಮೂಲಕ ಪದಗ್ರಹಣ ಮಾಡಿಸಿದರು.

ಶ್ರೀ ವಚನಾನಂದ ಸ್ವಾಮೀಜಿ, ಅಲುಗೂರು ಪಂಚಮಸಾಲಿ ಜಗದ್ಗುರು ಪೀಠದ ಮಹಾದೇವ ಶ್ರೀ, ಮಲ್ಲಿಕಾರ್ಜುನ ಶ್ರೀ, ಶಿವಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು.

ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಆಡಳಿತಾಧಿಕಾರಿ ಡಾ.ಎಚ್.ಪಿ.ರಾಜಕುಮಾರ್, ದಾವಣಗೆರೆ ಪಾಲಿಕೆ ಉಪ ಮೇಯರ್ ಶಾಂತಕುಮಾರ್ ಸೋಗಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶಂಭುಲಿಂಗಗೌಡ ಪಾಟೀಲ್, ನಿವೃತ್ತ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಉಮೇಶ್‌ಗೌಡ, ಪ್ರಕಾಶ್ ಪಾಟೀಲ್, ಚಂದ್ರಶೇಖರ್ ಪೂಜಾರ್, ಜ್ಯೋತಿ ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net