ಸಂಶೋಧನೆಗಳು ಸಮಾನಂತರ ಅಭಿವೃದ್ಧಿಗೆ ನೆರವಾಗಲಿ

HUN-FEB-22-1(D D URS COLLEGE PROGRAMME)
????????????????????????????????????
Published on

ಹುಣಸೂರು: ಭಾರತ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಬೇಕೆಂದರೆ ದೇಶದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಮಾನಾಂತರ ಬೆಳವಣಿಗೆ ಕಾಣುವ ಅವಶ್ಯಕತೆ ಇದೆ ಎಂದು ತಮಿಳುನಾಡಿನ ಚೆನ್ನೈ ಸ್ಕೂಲ್ ಆಫ್ ಲಾ ವೆಲ್ ಟೆಕ್ ಯೂನಿವರ್ಸಿಟಿಯ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವೈ.ಎಬನೇಝರ್ ಅಭಿಪ್ರಾಯಪಟ್ಟರು.


ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಸಂಶೋಧನಾ ವಿಧಾನ ಮತ್ತು ಸಾಂಖ್ಯಿಕ ಅಳವಡಿಕೆಗಳು ಕುರಿತು ರಾಷ್ಟ್ರ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಪ್ರಧಾನ ಭಾಷಣ ಮಾಡಿದರು. 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನನಸಾಗಿಸಲು ಸಾಕಷ್ಟು ಅಡೆತಡೆಗಳನ್ನು ಮೀರಿ ನಿಲ್ಲಬೇಕಿದೆ. ದೇಶದ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿನ ವೈರುಧ್ಯ ಮತ್ತು ಅಸಮಾನತೆಗಳನ್ನು ಮೆಟ್ಟಿ ನಿಲ್ಲುವುದು ಅಷ್ಟು ಸುಲಭದ ಮಾತಲ್ಲ ಎಂದರು.


ಸಾಮಾಜಿಕ ಕ್ಷೇತ್ರವು ಸಮಾಜ, ರಾಜಕೀಯ ಮತ್ತು ಆರ್ಥಿಕತೆ ಮೂರನ್ನೂ ಒಳಗೊಂಡಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂದು ಕರೆಯಿಸಿಕೊಳ್ಳಲು ಇರುವ ಪ್ರಮುಖ ಮಾನದಂಡದ ಪೈಕಿ ಮಾನವ ಸಂಪನ್ಮೂಲ ಅಭಿವೃದ್ಧಿಯ ವಿಷಯದಲ್ಲಿ ವಿಶ್ವದ 175 ದೇಶಗಳ ಪೈಕಿ ಭಾರತ ಇನ್ನೂ 132ರ ಸ್ಥಾನದಲ್ಲಿದೆ. ಭಾರತದಲ್ಲಿ ಇಂದಿಗೂ ಶೇ.28 ಕುಟುಂಬಗಳು ಕಡುಬಡತನದಲ್ಲಿವೆ. ದಕ್ಷಿಣ ಭಾಗದ ರಾಜ್ಯಗಳು ಸೇವಾ ಕ್ಷೇತ್ರ, ಕೈಗಾರಿಕೆ ಕ್ಷೇತ್ರಗಳಿಂದ ನೀಡುವ ಜಿಡಿಪಿ ದರ ಇತರ ರಾಜ್ಯಗಳಿಗೆ ಹೋಲಿಸಿದರೆ ಸದೃಢವಾಗಿದೆ. ಈ ರೀತಿಯ ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಶೋಧನೆಗಳು ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಮಾನಂತರ ಬೆಳವಣಿಗೆ ಕಾಣುವಂತೆ ಮಾಡಿದ್ದಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂದರು.


ಪ್ರಾಂಶುಪಾಲೆ ಡಾ.ಆರ್.ಕವಿತಾ ಮಾತನಾಡಿ, ಸಂಶೋಧನೆಗಾಗಿ ಸಂಶೋಧನೆ ಮಾಡುವುದನ್ನು ಸಂಶೋಧನಾ ವಿದ್ಯಾರ್ಥಿಗಳು ಕೈಬಿಡಬೇಕು. ನಿಮ್ಮ ಸಂಶೋಧನೆ ಸಮಾಜಕ್ಕೆ ಒಳಿತನ್ನು ಉಂಟು ಮಾಡುವಂತಿರಬೇಕು. ಸಂಶೋಧನೆಯಲ್ಲಿ ವೃತ್ತಿಪರತೆ ಬೆಳೆಸಿಕೊಂಡು ದೇಶಕ್ಕೆ ಕೊಡುಗೆ ನೀಡುವತ್ತ ಗುರಿ ಇರಬೇಕು ಎಂದು ಸಲಹೆ ನೀಡಿದರು.


ಐಕ್ಯೂಎಸಿ ಸಂಚಾಲಕ ಡಾ.ಬಸವರಾಜ್, ಸಂಶೋಧನಾ ಕೇಂದ್ರದ ಸಂಚಾಲಕ ಡಾ.ಬಿ.ಸಿ.ಸುರೇಶ್, ತರಬೇತಿ ಕಾರ್ಯಾಗಾರದ ಸಹ ಸಂಯೋಜನಾಧಿಕಾರಿ ಡಾ.ಆರ್.ಉಮಾಕಾಂತ್ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದ ಸಂಶೋಧನಾ ವಿದ್ಯಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳು, ಕಾಲೇಜಿನ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net