ಅಂಜನಾಪುರದಲ್ಲಿ ಗುಂಡಿ ಬಿದ್ದ ರಸ್ತೆಗೆ ಸಿಕ್ತು ಮುಕ್ತಿ

impt
Published on

ನಿರ್ವಹಣೆ ಕಾರ್ಯಕ್ಕೆ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಒತ್ತು

ಕೈಲಾಂಚ: ಹೋಬಳಿಯ ಅಂಜನಾಪುರದಲ್ಲಿ ನೀರಿನ ಪೈಪ್​ ಅಳವಡಿಕೆಗೆ ತೆಗೆದು ಹಾಗೆಯೇ ಬಿಟ್ಟಿದ್ದ ಗುಂಡಿಯನ್ನು ಮುಚ್ಚಿ ರಸ್ತೆ ನಿರ್ವಹಣೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಂದಾಗಿದೆ.

ವಿಭೂತಿಕೆರೆ ಗ್ರಾಪಂ ವ್ಯಾಪ್ತಿಯ ಅಂಜನಾಪುರದಲ್ಲಿ ದೇವರದೊಡ್ಡಿ ಸೇರಿ ಇತರ ಗ್ರಾಮಗಳಿಗೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ನೀರಿನ ಪೈಪ್​ ಅಳವಡಿಕೆಗೆ ಅಗೆದಿದ್ದ ಸಿಮೆಂಟ್​ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚದೆ ಹಾಗೆಯೇ ಬಿಡಲಾಗಿತ್ತು.

ಪೈಪ್​ ಅಳವಡಿಸಿದ ನಂತರ ಜಲ್ಲಿ ಹಾಕಿ ರಸ್ತೆ ನಿರ್ವಹಣೆ ಮಾಡಲು ಕಳೆದ ಒಂದು ತಿಂಗಳಿಂದಲೂ ಗುತ್ತಿಗೆದಾರರು ಮುಂದಾಗಿರಲಿಲ್ಲ. ಇದರಿಂದ ಸಾರ್ವಜನಿಕರು, ಹಿರಿಯರು, ವಿದ್ಯಾರ್ಥಿಗಳು ಹಾಗೂ ವಾಹನಗಳ ಓಡಾಟಕ್ಕೆ ಕಷ್ಟವಾಗುತ್ತಿದೆ ಎಂದು "ವಿಜಯವಾಣಿ'ಯಲ್ಲಿ ಶುಕ್ರವಾರ "ಅಗೆದ ರಸ್ತೆ ಹಾಗೇ ಬಿಟ್ಟ ಗುತ್ತಿಗೆದಾರ!' ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿ ಬಂದ ಮಾರನೇ ದಿನವೇ ಕೆಲಸ ಪ್ರಾರಂಭಿಸಿರುವ ಗುತ್ತಿಗೆದಾರ ಮತ್ತು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಭಾನುವಾರ ಅಂಜನಾಪುರ ದೇವರದೊಡ್ಡಿ ರಸ್ತೆ ನಿರ್ವಹಣೆ ಕೆಲಸ ಮುಗಿಸಿದ್ದಾರೆ.

ಪೈಪ್​ ಅಳವಡಿಕೆ ಮಾಡಿದ ಸ್ಧಳದಲ್ಲಿ ಸಿಮೆಂಟ್​ ಜಲ್ಲಿ ಹಾಕಿ, ರಸ್ತೆ ಮೊದಲಿದ್ದ ರೀತಿಯಲ್ಲಿ ಗುಣಮಟ್ಟದಲ್ಲಿ ನಿರ್ವಹಣೆ ಮಾಡಲಾಗಿದೆ. ನಂತರವೂ ಸಿಮೆಂಟ್​ ಹಾಕಿದ ಸ್ಥಳದಲ್ಲಿ ನೀರು ಹಾಕಿ ಕ್ಯೂರಿಂಗ್​ ಮಾಡಲಾಗುತ್ತದೆ. > ಜೈಪ್ರಕಾಶ್​ ಎಇಇ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net