

ರಾಮನಗರ
ನಗರ ಸಮೀಪದ ವಡೇರಹಳ್ಳಿ ಬಳಿಯ ಖಾಸಗಿ ಜಮೀನನಲ್ಲಿ ಕಾಣಿಸಿಕೊಂಡಿದ್ದ ಸುಮಾರು ಒಂದು ವರ್ಷದ ಗಂಡು ಕರಡಿಯನ್ನು ಅರಣ್ಯ ಇಲಾಖೆ ಬುಧವಾರ ರಕ್ಷಣೆ ಮಾಡಿದೆ.
ಹಂದಿಗೊಂದಿ ಅರಣ್ಯ ವಲಯದ ಬಸವನಪುರ ಬಳಿಯ ರಾಮದೇವರ ಬೆಟ್ಟದಲ್ಲಿ ಕರಡಿಗಳಿವೆ. ಕರಡಿ ತಾಯಿ ಜತೆ ಆಹಾರ ಅರಸಿ ಬಂದಿದೆ. ಈ ವೇಳೆ ಬೇರ್ಪಟ್ಟು ಸ್ವಸ್ಥಾನಕ್ಕೆ ರಸ್ತೆ ದಾಟಿ ಹೋಗಲು ಹೆದರಿ ಮರಗಿಡಗಳ ಮಧ್ಯೆ ಸೇರಿದೆ. ಮೂರ್ನಾಲ್ಕು ದಿನಗಳಿಂದಲೂ ಕರಡಿ ಜಮೀನು ಬಳಿಯೇ ಓಡಾಟ ನಡೆಸಿದ್ದನ್ನು ಕಂಡ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಬನ್ನೇರುಟ್ಟ ಪಶುವೈದ್ಯ ಡಾ.ಆನಂದ್ ಅವರನ್ನು ಕರೆಸಿ ಅರಿವಳಿಕೆ ನೀಡಿ ಕರಡಿಯನ್ನು ರಕ್ಷಣೆ ಮಾಡಿದ್ದಾರೆ. ಕರಡಿ ಆಹಾರ ಇಲ್ಲದೆ ನಿತ್ರಾಣಗೊಂಡಿತ್ತು. ಕರಡಿ ಅನಾರೋಗ್ಯಕ್ಕೆ ಒಳಗಾಗಿದ್ದನ್ನು ಗಮಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬನ್ನೇರುಟ್ಟ ಬಯಾಲಾಜಿಕಲ್ ಪಾರ್ಕ್ಗೆ ತೆಗೆದುಕೊಂಡು ಹೋದರು.
ಡಿಸಿಎಫ್ ಎಂ.ರಾಮಕೃಷ್ಣಪ್ಪ, ಎಸಿಎಫ್ ಪುಟ್ಟಮ್ಮ, ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್, ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ್, ಬನ್ನೇರುಟ್ಟ ಪಶುವೈದ್ಯ ಡಾ.ಉಮಾಶಂಕರ್, ಬನ್ನೇರುಟ್ಟ ಎಸ್ಓಎಸ್ ತಂಡ, ಅರಣ್ಯ ರಕ್ಷಕ ಶಾಂತಕುಮಾರ್ ಇತರರು ಇದ್ದರು.
ರಾಮದೇವರ ಬೆಟ್ಟ ಮತ್ತು ಹಂದಿಗೊಂದಿ ಅರಣ್ಯದಲ್ಲಿನ ಪ್ರಾಣಿಗಳು ಈ ಹಿಂದೆ ಒಂದು ಅರಣ್ಯದಿಂದ ಒಂದು ಅರಣ್ಯಕ್ಕೆ ಮುಕ್ತ ಓಡಾಟ ನಡೆಸುತ್ತಿದ್ದವು. ಆದರೆ ಬೆಂಗಳೂರು&ಮೈಸೂರು ಎಕ್ಸ್ಪ್ರೆಸ್ ಹೈವೇ ಆದ ನಂತರ ವನ್ಯ ಜೀವಿಗಳು ಒಂದಿಲ್ಲೊಂದು ಅಪಾಯಕ್ಕೆ ತುತ್ತಾಗುವುದನ್ನು ಕಾಣಲಾಗುತ್ತಿದೆ. ವನ್ಯ ಪ್ರಾಣಿಗಳ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲು ಸೂಕ್ತ ಒಳ ರಸ್ತೆ ನಿರ್ಮಿಸಿದರೆ ಸಮಸ್ಯೆ ತಪ್ಪಿಸಬಹುದು. ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕರಡಿ ನಿತ್ರಾಣಗೊಂಡು ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯರ ಶಿಫಾರಸ್ಸಿನ ಮೇರೆಗೆ ಕರಡಿಯನ್ನು ಹೆಚ್ಚಿನ ಚಿಕಿತ್ಸೆಗೆ ಬನ್ನೇರುಟ್ಟ ಬಯಾಲಾಜಿಕಲ್ ಪಾರ್ಕ್ಗೆ ಕಳಿಸಲಾಯಿತು.
ಎಂ. ರಾಮಕೃಷ್ಣಪ್ಪ, ಡಿಸಿಎಫ್, ರಾಮನಗರ.