ಉಳ್ಳಾಲ: ಅಟ್ಟಾಡಿಸಿಕೊಂಡು ಬಂದ ನಾಯಿಯಿಂದ ರಕ್ಷಿಸಿಕೊಳ್ಳಲು ದಂಡೆಯೇರಿ ಬಾವಿಗೆ ಬಿದ್ದ ಬಾಲಕಿಯನ್ನು ಯುವಕನೊಬ್ಬ ರಕ್ಷಿಸಿದ್ದಾನೆ. ತೌಡುಗೋಳಿ ಸಮೀಪದ ಕಲ್ಮಿಂಜದಲ್ಲಿ ಸೋಮವಾರ ಪಿಯುಸಿ ವಿದ್ಯಾರ್ಥಿನಿ ಮಾವನ ಮನೆಗೆ ಹೋಗಿ ವಾಪಸಾಗುತ್ತಿದ್ದ ಸಂದರ್ಭ ನಾಯಿಯೊಂದು ಅಟ್ಟಾಡಿಸಿಕೊಂಡು ಬಂದಿದೆ. ಹೆದರಿದ ಬಾಲಕಿ ಓಡಿ ಹೋಗಿ ಮನೆಯ ಬಾವಿ ದಂಡೆ ಹತ್ತಿದ್ದಾಳೆ. ನಾಯಿ ಬೊಗಳಿದ್ದರಿಂದ ಹೆದರಿಕೆಯಿಂದ ನಿಯಂತ್ರಣ ಕಳೆದುಕೊಂಡು ಬಾವಿಗೆ ಬಿದ್ದಿದ್ದಾಳೆ. ಇದನ್ನು ಕಂಡ ಆಸುಪಾಸಿನವರು ಬಾಲಕಿಯ ರಕ್ಷಣೆಗೆ ಧಾವಿಸಿದ್ದು, ಸ್ಥಳೀಯ ಯುವಕ ಮಹಮ್ಮದ್ ಶರೀಫ್ ಬಾವಿಗೆ ಜಿಗಿದು ಬಾಲಕಿಯನ್ನು ಮೇಲಕ್ಕೆ ತಂದು ರಕ್ಷಿಸಿದ್ದಾರೆ.