

ಮದ್ದೂರು: ತಾಲೂಕಿನ ಎಲ್ಲ ಆಸ್ಪತ್ರೆಗಳನ್ನು ಮೇಲ್ದದರ್ಜೆಗೇರಿಸುವ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು, ಹಂತ ಹಂತವಾಗಿ ಸರ್ಕಾರಿ ಆಸ್ಪತ್ರೆಗಳನ್ನು ಉನ್ನತೀಕರಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.
ಪಟ್ಟಣದ ಶ್ರೀ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಆರೋಗ್ಯ ಕವಚ ಯೋಜನೆಯಡಿ ನೀಡಿರುವ 108 ತುರ್ತು ಚಿಕಿತ್ಸಾ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕು ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಸಿಬ್ಬಂದಿ ಹಾಗೂ ಸೌಲಭ್ಯಗಳ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ. ಇಲ್ಲಿಯ ಸಮಸ್ಯೆಗಳನ್ನು ಬಗೆಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರ ಸಮಸ್ಯೆಗಳು ಬಗೆಹರಿಯಲಿವೆ ಎಂದರು.
ಬೆಸಗರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಇನ್ನು ಹಲವು ಆಸ್ಪತ್ರೆಗಳನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಪ್ರಗತಿ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಜನರಿಗೂ ಉತ್ತಮ ಚಿಕಿತ್ಸೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ, ಆರೋಗ್ಯ ನಿರೀಕ್ಷಕ ಡಾ.ತಮ್ಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಟಿಎಪಿಎಂಎಸ್ ಉಪಾಧ್ಯಕ್ಷ ಗೊರವನಹಳ್ಳಿ ರಾಘವ, ನಿರ್ದೇಶಕ ಅಡ್ಡರಸ್ತೆ ಗೋಪಿ, ಪುರಸಭಾ ಸದಸ್ಯರಾದ ಎಂ.ಬಿ.ಸಚಿನ್, ಮನೋಜ್, ಸರ್ವಮಂಗಳಾ, ಕೋಕಿಲಾ ಅರುಣ್, ಸಿದ್ದರಾಜು, ಮುಖಂಡರಾದ ಅವಿನಾಶ್, ಸಂತೋಷ್, ಜಯಪ್ರಕಾಶ್, ವೆಂಕಟೇಶ್ ಇದ್ದರು.