

ಹಾಸನ: ನಮ್ಮ ಮನೆಗೆ ರಸ್ತೆ ಸಮಸ್ಯೆ ಎದುರಾಗಿ ಮಕ್ಕಳು ಶಾಲೆಗೆ ತೆರಳಲು ಕಷ್ಟವಾಗಿದೆ. ಕೂಡಲೇ ನಮಗೆ ರಸ್ತೆ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಆಲೂರು ತಾಲೂಕಿನ ಹಬ್ಬನ ಗ್ರಾಮದ ಮಂಜುನಾಥ್, ಅನು ದಂಪತಿ ತಮ್ಮ ಮಕ್ಕಳೊಂದಿಗೆ ಆಗಮಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಂಜುನಾಥ್, ಹಬ್ಬನ ಗ್ರಾಮದ ತಮ್ಮ ಮನೆಗೆ ತೆರಳಲು ಅಕ್ಕಪಕ್ಕದ ಮನೆಯವರು ಅಡ್ಡಿ ಮಾಡಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ನಮ್ಮ ಮನೆ ಸಂಪರ್ಕಿಸಲು ಆಗದಂತಹ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.
ಗ್ರಾಮದ 205ನೇ ಸರ್ವೇ ನಂಬರ್‌ನಲ್ಲಿ ತಾನು ಸೇರಿದಂತೆ 25 ಜನರಿಗೆ ಸರ್ಕಾರದಿಂದ ನಿವೇಶನ ನೀಡಲಾಗಿತ್ತು. ಇದೀಗ ಗ್ರಾಮದ ಕೆಲ ಪ್ರಭಾವಿಗಳು ನಮಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಪ್ರಶ್ನೆ ಮಾಡಿದರೆ ನಮ್ಮ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ನಮ್ಮ ಮೇಲಿನ ದೌರ್ಜನ್ಯ ನಿಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ವಾಸವಿರುವ ಜಾಗಕ್ಕೆ ಈಗಾಗಲೇ ಹಕ್ಕು ಪತ್ರ ಪಡೆದು ಮನೆ ನಿರ್ಮಿಸಿಕೊಂಡ ವಾಸ ಮಾಡುತ್ತಿದ್ದೇವೆ. ಈ ಗಲಾಟೆ ಬಳಿಕ ಪೊಲೀಸ್ ಇಲಾಖೆಗೆ ದೂರು ನೀಡಿದಾಗ ನಮ್ಮ ಮನೆ ಬಳಿ ಇರುವ ಸಿಸಿ ಕ್ಯಾಮರಾ ವಿಡಿಯೋ ತುಣುಕುಗಳನ್ನು ವಶಕ್ಕೆ ಪಡೆದು ಗಲಾಟೆ ನಡೆದಿರುವ ವಿಡಿಯೋ ಡಿಲೀಟ್ ಮಾಡಿ ನಮ್ಮದೇ ತಪ್ಪು ಎಂಬಂತೆ ಬಿಂಬಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಇದನ್ನು ಗಂಭೀರವಾಗಿ ಪರಿಗಣಿಸಿ ನಮಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದರು.