

ಕೆ.ಆರ್.ಪೇಟೆ: ಸಾವಿರಾರು ಮಕ್ಕಳ ಆರಂಭಿಕ ಶಿಕ್ಷಣಕ್ಕೆ ತಳಹದಿಯಾಗಿರುವ ಅಂಗನವಾಡಿಗಳ ಅಭಿವೃದ್ಧಿ ನಮ್ಮೆಲ್ಲರ ಜವಾಬ್ದಾರಿ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.
ತಾಲೂಕಿನ ಶೀಳನೆರೆ ಹೋಬಳಿ ಚನ್ನಾಪುರ ಗ್ರಾಮದಲ್ಲಿ ನಿರ್ಮಿಸಿರುವ ಅಂಗನವಾಡಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಕ್ಕಳ ಅಪೌಷ್ಟಿಕತೆ ನಿವಾರಣೆ, ಗರ್ಭಿಣಿಯರು, ಬಾಣಂತಿಯರ ಆರೋಗ್ಯದ ವಿಷಯದಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಮೊಟ್ಟೆ, ಶೇಂಗಾಚಿಕ್ಕಿ, ಪೌಷ್ಟಿಕ ಆಹಾರ, ದ್ವಿದಳ ಧಾನ್ಯಗಳು ಸೇರಿದಂತೆ ಗುಣಮಟ್ಟದ ಆಹಾರ ಒದಗಿಸುತ್ತಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಇಲಾಖೆಯ ಕೆಲಸದ ಒತ್ತಡದ ನಡುವೆಯೂ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದಾರೆ. ಆದರೆ, ಅವರಿಗೆ ನೀಡುತ್ತಿರುವ ಗೌರವಧನ ಕಡಿಮೆ. ಇಲಾಖೆಯ ಸಚಿವರಿಗೆ ಗೌರವಧನ ಹೆಚ್ಚಿಸುವ ಬಗ್ಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಸಿಡಿಪಿಒ ಅರುಣ್ ಕುಮಾರ್, ಮುಖಂಡರಾದ ಮಂಜೇಗೌಡ, ಚನ್ನಕೇಶವೇಗೌಡ, ಶಿಕ್ಷಕಿ ಸುಷ್ಮ್ಮಾ, ಅಂಗನವಾಡಿ ಕಾರ್ಯಕರ್ತೆ ಬಿ.ಬಿ.ಪ್ರಮೀಳಾ ಇದ್ದರು.