

ಮಾಗಡಿ: ತಾಲೂಕಿಗೆ ಹೇಮಾವತಿ ನೀರು ಹರಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಮಧ್ಯಪ್ರವೇಶಿಸುವಂತೆ ಆದಿಚುಂಚನಗಿರಿ ಮಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಲ್ಲಿ ತಾಲೂಕಿನ ಮಠಾಧ್ಯಕ್ಷರು, ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಮನವಿ ಮಾಡಿದರು.
ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಗದ್ದುಗೆಮಠದ ಮಹಂತಸ್ವಾಮೀಜಿ, ಕಂಚುಗಲ್ಲು ಬಂಡೇಮಠದ ಮಹಾಲಿಂಗ ಸ್ವಾಮೀಜಿ, ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ಅವರು, ಹೇಮಾವತಿ ನೀರು ತಾಲೂಕಿಗೆ ಅವಶ್ಯವಾಗಿದ್ದು, ನಮಗೆ ಹಂಚಿಕೆಯಾದ ನೀರನ್ನು ಕೊಡಿಸುವಂತೆ ಸಂಬಂಧಪಟ್ಟವರಲ್ಲಿ ಮನವಿ ಮಾಡುವಂತೆ ಕೋರಿದರು.
ಆದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ನೀರು ಎಲ್ಲರ ಹಕ್ಕು. ಎಲ್ಲರಿಗೂ ನೀರು ಅವಶ್ಯವಾಗಿದೆ. ಬೆಂಗಳೂರಿಗೆ ತೆರಳಿ ಹೇಮಾವತಿ ನೀರಾವರಿ ಯೋಜನೆಯ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಸಂಪೂರ್ಣ ಮಾಹಿತಿ ಪಡೆದು ಮಾಗಡಿ ತಾಲೂಕಿಗೆ ನ್ಯಾಯ ಒದಗಿಸುತ್ತೇವೆ ಎಂದರು.
ಬಂಡೇಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಮಾತನಾಡಿ, ತಾಲೂಕಿನಲ್ಲಿ ನಿರಂತರವಾಗಿ ಹೋರಾಟಗಳು ನಡೆಯುತ್ತಿದ್ದರೂ ಸರ್ಕಾರ ಸರ್ವಪಕ್ಷಗಳ ಸಭೆಕರೆದು ಯೋಜನೆ ಪೂರ್ಣಗೊಳಿಸಲು ಮುಂದಾಗಿಲ್ಲ. ತಾಲೂಕಿಗೆ ಹೇಮಾವತಿ ನೀರು ಬಂದರೆ ನಿರುದ್ಯೋಗ ಸಮಸ್ಯೆ ಬಗೆಹರಿಸಬಹುದು. ನಮಗೆ ಹಂಚಿಕೆಯಾದ ನೀರನ್ನು ಹರಿಸದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಜಡೇದೇವರ ಮಠದ ಶ್ರೀ ಇಮ್ಮಡಿ ಬಸವರಾಜ ಸ್ವಾಮೀಜಿ ಮಾತನಾಡಿ, 30 ವರ್ಷಗಳಿಂದ ಮಾಗಡಿಗೆ ಹೇಮಾವತಿ ನೀರು ಹರಿಸುವಂತೆ ಹೋರಾಟ ನಡೆಸಿದ ಪರಿಣಾಮ ಸರ್ಕಾರ ಮುಕ್ಕಾಲು ಟಿಎಂಸಿ ನೀರು ಹಂಚಿಕೆಮಾಡಿತು, ಹಂಚಿಕೆಯಾದ ನೀರನ್ನು ಪಡೆಯಲು ಮತ್ತೆ ಹೋರಾಟ ನಡೆಸುವ ಸ್ಥಿತಿ ಬಂದಿರುವುದು ನಮ್ಮ ದೌರ್ಭಾಗ್ಯ. ಹೋರಾಟಕ್ಕೆ ಆದಿಚುಂಚನಗಿರಿ ಮಠಾಧ್ಯಕ್ಷರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದರು.
ಕಣ್ಣೂರು ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ್, ನಾಗರುದ್ರ ಶರ್ಮ, ಚಂದ್ರಶೇಖರ್, ರಾಜ್ಯ ಕೆಪಿಸಿಸಿ ಸಾಮಾಜಿಕ ಜಾಲತಾಣ ಸಂಯೋಜಕ ಜಿ.ಆರ್.ಮಧು, ಕಿರಣ್ ಕುಮಾರ್, ಪ್ರಭುದೇವ, ಅನಿಲ್, ಆರಾಧ್ಯ, ಶುಭೋದಯ ಮಹೇಶ್, ವೀರಶೈವ ಮಹಾಸಭಾ ಜಿಲ್ಲಾ, ತಾಲೂಕು ನಿರ್ದೇಶಕರು ಇದ್ದರು.
ಹೇಮಾವತಿ ನೀರು ತಾಲೂಕಿಗೆ ಅವಶ್ಯವಾಗಿದೆ. 3 ಜಲಾಶಯಗಳಿದ್ದರೂ ಕುಡಿಯುವ ನೀರಿನಿಂದ ವಂಚಿತರಾಗಿದ್ದೇವೆ. ನೀರಿಗಾಗಿ ಬೇಡುವ ಸ್ಥಿತಿ ನಿರ್ಮಾಣವಾಗಿರುವುದು ಬೇಸರವಾಗಿದೆ. ಸರ್ಕಾರ ಪ್ರತಿ ವರ್ಷ ನೀರಿಗಾಗಿ ಸಾವಿರಾರು ಕೋಟಿ ರೂ. ವ್ಯಯಮಾಡಿದರೂ ಸಮರ್ಪಕವಾಗಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ತಡೆಯೊಡ್ಡುವವರಿಗೆ ಅರಿವು ಮೂಡಿಸಿ ಕಾಮಗಾರಿ ಆರಂಭಕ್ಕೆ ಸರ್ಕಾರ ಮುಂದಾಗಬೇಕು. - ಶ್ರೀ ಮಹಂತ ಸ್ವಾಮೀಜಿ, ಗದ್ದುಗೆ ಮಠದ