

ಅರಕಲಗೂಡು: ಕಾವೇರಿ ಮತ್ತು ಹೇಮಾವತಿ ನದಿಯಿಂದ ಈ ಭಾಗದ ಬಹುತೇಕ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸುವ ಸಲುವಾಗಿ ಲಕ್ಕೂರು-ಸೋಂಪುರ ಹಾಗೂ ಕಣಿಯಾರು ಬಳಿ ಏತನೀರಾವರಿ ಯೋಜನೆಗೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಕಾಂಗ್ರೆಸ್ ಮುಖಂಡ ಎಂ.ಟಿ.ಕೃಷ್ಣೇಗೌಡ ಹೇಳಿದರು.
ತಾಲೂಕಿನ ರಾಮನಾಥಪುರದಲ್ಲಿ ತುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಸೋಮವಾರ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿ ನದಿಗಳು ತುಂಬಿ ಹರಿದು ರೈತರಿಗೆ ಹಾಗೂ ನಾಡಿಗೆ ಒಳಿತಾಗಿದೆ. ತಾಲೂಕಿನಲ್ಲಿ ಕಾವೇರಿ ಹಾಗೂ ಹೇಮಾವತಿ ನದಿ ಹರಿದರೂ ಹೆಚ್ಚಿನ ಅನುಕೂಲವಾಗಿಲ್ಲ. ಈ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರುಣಿಸಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ನದಿ ಮೇಲ್ಭಾಗದ ಸಾವಿರಾರು ಎಕರೆ ಸಾಗುವಳಿ ಜಮೀನು ನೀರಾವರಿ ಸೌಲಭ್ಯದಿಂದ ವಂಚಿತವಾಗಿ ಅನ್ನದಾತರಿಗೆ ಅನ್ಯಾಯವಾಗುತ್ತಿದೆ. ರೈತರ ಹಿತದೃಷ್ಟಿಯಿಂದ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಪ್ರವಾಸಿ ತಾಣವಾಗಿ ರೂಪುಗೊಳ್ಳಬೇಕಿದ್ದ ರಾಮನಾಥಪುರ ಪ್ರಗತಿ ಕಾಣದಾಗಿದೆ. ಅನೇಕ ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿದ್ದು ಅಭಿವೃದ್ಧಿಯಿಂದ ವಂಚಿತಗೊಂಡಿವೆ. ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದ್ದರೆ ನಾಡಿನ ವಿವಿಧೆಡೆಯಿಂದ ಬರುವ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಅನುಕೂಲ ಆಗುತ್ತಿತ್ತು. ನಾನು ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಈ ಕುರಿತು ಪ್ರಣಾಳಿಕೆ ಸಿದ್ಧಪಡಿಸಿದ್ದೆ. ಮುಂದಿನ ದಿನಗಳಲ್ಲಿ ಜನರು ಆಶೀರ್ವದಿಸಿದರೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಮುಖಂಡರಾದ ಬಿ.ಜೆ.ರಾಮೇಗೌಡ, ಶ್ರೀಶೈಲ, ಗೋವಿಂದರಾಜು, ಚಿಕ್ಕಣ್ಣಶೆಟ್ಟಿ, ಕಾಂತರಾಜು, ಗಣೇಶ್, ರವೀಂದ್ರ, ನಾಗರಾಜು, ಕುಮಾರ್, ಯೋಗಣ್ಣ, ಮಂಜು, ಸುಬ್ರಹ್ಮಣ್ಯ, ಸುರೇಶ್, ಪುಟ್ಟರಾಜು, ಪ್ರಸನ್ನ, ಮಹೇಶ್, ರಂಗಸ್ವಾಮಿ, ಕೇಶವೇಗೌಡ, ಜಮೀರ್, ದೇವರಾಜೇಗೌಡ ಇತರರಿದ್ದರು.