ಅನುದಾನ ನೀಡುವಂತೆ ಸಿಎಂಗೆ ಮನವಿ

2. ...
Published on

ಶ್ರವಣಬೆಳಗೊಳ: ಅಂಗನವಾಡಿಗಳ ಮೂಲಕ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


ಹೋಬಳಿಯ ಜಿನ್ನಾಥಪುರ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂಗನವಾಡಿ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಕುಡಿಯುವ ನೀರು, ರಸ್ತೆ, ಶಾಲಾ ಕಟ್ಟಡಗಳು ಸೇರಿದಂತೆ ಗ್ರಾಮಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಅಭಿವೃದ್ಧಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಈ ಬಜೆಟ್‌ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಲಾಗಿದ್ದು ಜೂನ್ ತಿಂಗಳಲ್ಲಿ ಬಿಡುಗಡೆಯಾಗುತ್ತದೆ. ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊರತೆಯಾಗದಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.


ಗ್ರಾಮಕ್ಕೆ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು, ಸುಸಜ್ಜಿತ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಜಿನ್ನಾಥಪುರ ಕೊಪ್ಪಲು ಗ್ರಾಮದಲ್ಲಿ ಕಳೆದ ಸಾಲಿನಲ್ಲಿ ಹಾಲಿನ ಡೇರಿ ಸೇರಿದಂತೆ ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಈಗ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಗೂ ಗ್ರಾಮದ 200 ಮೀಟರ್ ರಸ್ತೆ ಡಾಂಬರೀಕರಣ ಆಗಬೇಕು ಎಂದು ಮನವಿ ಸಲ್ಲಿಸಿದ್ದು, ಕಾಮಗಾರಿ ಆರಂಭಿಸಲಾಗುವುದು. ಗ್ರಾಮದ ಶ್ರೀ ಸತ್ಯಮ್ಮ ಕನ್ನಂಬಾಡಮ್ಮ ದೇವಸ್ಥಾನಕ್ಕೆ ಜುಲೈ ತಿಂಗಳಲ್ಲಿ 5 ಲಕ್ಷ ರೂ.ಅನುದಾನ ನೀಡುವುದಾಗಿ ಭರವಸೆ ನೀಡಿದರು.


ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾಕ್ಷಿ ಚಂದ್ರಾಚಾರ್, ಉಪಾಧ್ಯಕ್ಷ ಜಯರಾಮ್, ಸದಸ್ಯೆ ಜಯಲಕ್ಷ್ಮೀ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪರಮ ದೇವರಾಜೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಎನ್.ಕೃಷ್ಣೇಗೌಡ, ಮುಖಂಡರಾದ ದೇವರಾಜ್, ಮಂಜಣ್ಣ, ರವಿ, ದೇವಣ್ಣ, ಪಿಡಿಒ ಎಂ.ಮೋಹನ್ ತಾಜ್, ಅಂಗನವಾಡಿ ಮೇಲ್ವಿಚಾರಕಿ ಪಾರ್ವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net