

ಹನೂರು: ವಿಧಾನಸಭಾ ಕ್ಷೇತ್ರದ ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆದಿಂಬ ಹಾಗೂ ಗೊಂಬೆಗಲ್ಲು ಗಿರಿಜನರ ಹಾಡಿಯ ಮತದಾರರಿಗೆ ಅತ್ತಿಖಾನೆ ಮತಗಟ್ಟೆಗೆ ತೆರಳಲು ವಾಹನ ವ್ಯವಸ್ಥೆ ಕಲ್ಪಿಸುವಂತೆ ಗುರುವಾರ ಗ್ರಾಮಸ್ಥರು ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಅವರಲ್ಲಿ ಮನವಿ ಮಾಡಿದರು.
ಪಟ್ಟಣದ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯಲ್ಲಿ ತೆರೆಯಲಾಗಿರುವ ಮಸ್ಟರಿಂಗ್ ಕೇಂದ್ರದಲ್ಲಿ ಜಿಲ್ಲಾ ಬುಡಕಟ್ಟು ಸೋಲಿಗರ ಅಭಿವೃದ್ಧಿ ಸಂಘದ ಜಂಟಿ ಕಾರ್ಯದರ್ಶಿ ಮಾದೇವ ಅವರು ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಅರಣ್ಯ ಪ್ರದೇಶದಿಂದ ಆವೃತವಾಗಿರುವ ಕೆರೆದಿಂಬ ಹಾಗೂ ಗೊಂಬೆಗಲ್ಲು ಗಿರಿಜನರ ಹಾಡಿಯಲ್ಲಿ ಸುಮಾರು 190ಕ್ಕೂ ಹೆಚ್ಚು ಮತದಾರರಿದ್ದಾರೆ. ಆದರೆ ಈ ಗ್ರಾಮದಲ್ಲಿ ಮತಗಟ್ಟೆಯಿಲ್ಲ. ಬದಲಾಗಿ 10 ಕಿ.ಮೀ.ದೂರದ ಅತ್ತಿಖಾನೆಯಲ್ಲಿ ಮತಗಟ್ಟೆಯನ್ನು ತೆರೆಯಲಾಗಿದೆ. ಆದರೆ ಇದೀಗ ಬೇಸಿಗೆ ಆಗಮಿಸಿರುವುದರಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ಭಯವಿದೆ. ಹಾಗಾಗಿ ವಯೋವೃದ್ಧರು, ಅಂಗವಿಕಲರು ಹಾಗೂ ಮಕ್ಕಳನ್ನು ಹೊಂದಿರುವ ತಾಯಂದಿರು ಕಾಲ್ನಡಿಗೆಯ ಮೂಲಕ ಅತ್ತಿಖಾನೆಯ ಮತಗಟ್ಟೆಗೆ ತೆರಳಲು ತುಂಬಾ ತೊಂದರೆಯಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಮತ ಚಲಾಯಿಸಲು ವಾಹನ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
ಮನವಿ ಆಲಿಸಿದ ಮಲ್ಲಿಕಾರ್ಜುನ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ ಕೆರೆದಿಂಬ ಹಾಗೂ ಗೊಂಬೆಗಲ್ಲು ಗ್ರಾಮದ ಜನರಿಗೆ ಮತದಾನ ಮಾಡಲು ಅಗತ್ಯ ವಾಹನ ವ್ಯವಸ್ಥೆ ಒದಗಿಸುವಂತೆ ಸೂಚಿಸಿದರು.
ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀನ್ ಮಠದ್, ತಾಪಂ ಸಹಾಯಕ ನಿರ್ದೇಶಕ ರವೀಂದ್ರ, ಪರಿಸರ ಪ್ರೇಮಿ ಕೃಷ್ಣಮೂರ್ತಿ ಮತ್ತಿತರರಿದ್ದರು.