ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗ್ರಹ

ಅತಿಥಿ ಉಪನ್ಯಾಸಕರ ನೇಮಕಕ್ಕೆ ಆಗ್ರಹ
Published on

ಹಾಸನ: ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಮಾಡಿ ಕಲಿಕೆಗೆ ನೆರವಾಗಬೇಕೆಂದು ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ನಗರದ ಹೇಮಾವತಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಚೈತ್ರಾ ಮಾತನಾಡಿ, ರಾಜ್ಯಾದ್ಯಂತ ಪದವಿ ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರನ್ನು ನೇಮಿಸಿಲ್ಲ. ರಾಜ್ಯದ ಎಲ್ಲ ಸರ್ಕಾರಿ ಕಾಲೇಜುಗಳು ಅತಿಥಿಗಳನ್ನೇ ಅವಲಂಬಿಸಿವೆ. ಉಪನ್ಯಾಸಕರಿಲ್ಲದೆ ಸರಿಯಾಗಿ ತರಗತಿ ನಡೆಯದೆ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು.

ಮುಂದಿನ ತಿಂಗಳು ಪದವಿ ವಿದ್ಯಾರ್ಥಿಗಳ ಮೊದಲ ಆಂತರಿಕ ಪರೀಕ್ಷೆಗಳು ನಡೆಯಬೇಕಿದ್ದು ಪಾಠಗಳು ಇನ್ನೂ ಆರಂಭವಾಗಿಲ್ಲ. ಯುಜಿಸಿಯ ಹೊಸ ನಿರ್ದೇಶನ ಹಾಗೂ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಉಪನ್ಯಾಸಕರ ನೇಮಕಾತಿಯು ನನೆಗುದಿಗೆ ಬಿದ್ದಿದೆ. ಶೈಕ್ಷಣಿಕ ವಿಷಯಗಳಲ್ಲಿ ರಾಜ್ಯ ಸರ್ಕಾರವು ಕೇಂದ್ರದ ನಿರ್ಧಾರಗಳನ್ನು ಪಾಲಿಸವುದು ಕಡ್ಡಾಯವಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಅದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಪೂರಕವಾದ ಸ್ಪಷ್ಟ ನಿಲುವು ತಾಳಬೇಕೆಂದು ಒತ್ತಾಯಿಸಿದರು.

ಶೈಕ್ಷಣಿಕ ಚಟುವಟಿಕೆಗಳು ಸರಾಗವಾಗಿ ನಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತುರ್ತಾಗಿ ಕೈಗೊಂಡು ಗೊಂದಲ ನಿವಾರಿಸಬೇಕೆಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಎಐಡಿಎಸ್‌ಒ ಜಿಲ್ಲಾ ಕಾರ್ಯಕರ್ತರಾದ ಸುಷ್ಮಾ, ಯಾಸ್ಮಿನ್, ಮೋಹನ್, ತಿಲಕ್, ಅಭಿಷೇಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net