ವೈವಿಧ್ಯತೆಯಲ್ಲಿದೆ ದೇಶದ ಐಕ್ಯತೆ, ಸಮಗ್ರತೆ

Republic_day
Published on

ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ

ತುಮಕೂರು: ಶಾಂತಿ, ಅಹಿಂಸೆ, ಸಮಾನತೆ, ಸಹಬಾಳ್ವೆ ಮತ್ತು ಸರ್ವಧರ್ಮ ಸಹಿಷ್ಣತೆ ನಮ್ಮ ಗಣತಂತ್ರ ವ್ಯವಸ್ಥೆಯ ಮೂಲ ಆಶಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಬಣ್ಣಿಸಿದರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಧರ್ಮ, ಬಣ್ಣ, ಭಾಷೆ, ಸಂಸತಿ, ಆಚಾರ-ವಿಚಾರಗಳ ವೈವಿಧ್ಯತೆಯ ನಡುವೆಯೂ ದೇಶದ ಐಕ್ಯತೆ, ಸಮಗ್ರತೆಯನ್ನು ಕಾಪಾಡಿಕೊಂಡು ಬರುತ್ತಿರುವುದು ನಮ್ಮ ಸಂವಿಧಾನದ ಹೆಗ್ಗಳಿಕೆಯಾಗಿದೆ ಎಂದರು.

ಪ್ರಜೆಗಳಿಂದ, ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಎಂಬುದು ಮೂಲತತ್ವವಾಗಿದೆ. ವಿವಿಧತೆಯಲ್ಲಿ ಏಕತೆ, ವೈವಿಧ್ಯಮಯ ಸಂಸತಿ, ಶ್ರೀಮಂತ ಇತಿಹಾಸವು ಸಮಗ್ರ ಭಾರತದ ಪರಿಕಲ್ಪನೆಯ ಅಡಿಪಾಯಗಳಾಗಿವೆ. ಜಗತ್ತಿನ ಶ್ರೇಷ್ಠ ಸಂವಿಧಾನ ಎನ್ನಿಸಿಕೊಂಡಿರುವ ಡಾ.ಬಿ.ಆರ್​.ಅಂಬೇಡ್ಕರ್​ ನೇತೃತ್ವದ ಭಾರತ ಸಂವಿಧಾನ ರಚನಾ ಸಮಿತಿಯಲ್ಲಿ ಸದಸ್ಯರಾಗಿದ್ದ ಬೆನಗಲ್​ ನರಂಹರಾವ್​ ಅವರು ಕನ್ನಡಿಗರು ಎಂಬುದು ನಮ್ಮಲ್ಲರಿಗೂ ಹೆಮ್ಮೆ. ಜಗತ್ತಿಗೆ ಮಾದರಿಯಾದ ಮಹಾನ್​ ಆಶಯಗಳನ್ನು ಹೊಂದಿರುವ ಸಂವಿಧಾನ ರೂಪಿಸಿಕೊಟ್ಟ ಎಲ್ಲ ಮಹಾನೀಯರನ್ನು ಸದಾ ಕಾಲಕ್ಕೂ ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಶೈಕ್ಷಣಿಕ ನಗರಿ ಔದ್ಯೋಗಿಕ ನಗರಿಯಾಗುತ್ತಿದೆ. ಗುಬ್ಬಿ ತಾಲೂಕಿನಲ್ಲಿ ಎಚ್​ಎಎಲ್​ ಕಾರ್ಖಾನೆ ಸ್ಥಾಪನೆಯಾಗಿದ್ದು ವಿಶ್ವಭೂಪಟದಲ್ಲಿ ಜಿಲ್ಲೆಯ ಚಿತ್ರಣ ಮೂಡಿದೆ. ಇಸ್ರೋ ಸಂಸ್ಥೆ ಶ್ರೀದಲ್ಲಿಯೇ ಕಾರ್ಯಾರಂಭ ಮಾಡಲಿದೆ. ಸ್ಮಾರ್ಟ್​ ಸಿಟಿ ಯೋಜನೆಯಲ್ಲಿ ತುಮಕೂರು ನಗರದ ಚಿತ್ರಣವೇ ಬದಲಾಗಿದೆ ಎಂದು ಸರ್ಕಾರದ ವತಿಯಿಂದ ಅನುಷ್ಠಾನವಾಗಿರುವ ಪಂಚ ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.

ಕ್ರಿಕೆಟ್​ ಸ್ಟೇಡಿಯಂ: ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್​ ಕ್ರೀಡಾಂಗಣ ನಿರ್ಮಾಣಕ್ಕೆ ತಾಲೂಕಿನ ಸೊರೆಕುಂಟೆ ಬಳಿ 41 ಎಕರೆಯನ್ನು ಕರ್ನಾಟಕ ಕ್ರಿಕೆಟ್​ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಇದು ನೇರ, ಪರೋಕ್ಷ ಉದ್ಯೋಗ ಸೃಷ್ಟಿಗೆ ಪೂರಕವಾಗಿದ್ದು ನೆರಹೊರೆಯ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ ಎಂದು ಪರಮೇಶ್ವರ್​ ಹೇಳಿದರು.

ತೆಂಗು ಪುನಶ್ಚೇತನಕ್ಕೆ 10382 ರೈತರಿಗೆ 15.50 ಕೋಟಿ ರೂ. ಸಹಾಯಧನ ನೀಡಲಾಗುತ್ತಿದೆ, ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್​ ಮೈದಾನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಕ್ರೀಡೆಗೆ ಪ್ರೋತ್ಸಾಹ ಸಿಗುವ ಜತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಆಶಯ ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆಗಾಗಿ ಜಿಲ್ಲೆಯ 8 ತಾಲೂಕುಗಳಲ್ಲಿ 3117 ಎಕರೆ ಜಮೀನು ಭೂಸ್ವಾಧಿನಪಡಿಸಬೇಕಾಗಿದ್ದು, ಈ ಪೈಕಿ 2679 ಎಕರೆ ಭೂಸ್ವಾಧಿನಪಡಿಸಿಕೊಳ್ಳಲಾಗಿದೆ. ಈವರೆಗೆ ಭೂ ಸ್ವಾಧಿನ ಪ್ರಕ್ರಿಯೆ ಕೈಗೊಂಡು 484.74 ಕೋಟಿ ರೂ. ಪರಿಹಾರವನ್ನು ಭೂಮಾಲೀಕರಿಗೆ ನೀಡಲಾಗಿದೆ ಎಂದರು.

ಶಾಸಕರಾದ ಬಿ.ಸುರೇಶ್​ಗೌಡ, ಜಿ.ಬಿ.ಜ್ಯೋತಿಗಣೇಶ್​, ಆರ್​.ರಾಜೇಂದ್ರ, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು, ಪೊಲೀಸ್​ ಅಧೀಕ್ಷಕ ಕೆ.ವಿ.ಅಶೋಕ್​, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net