ಪದೇಪದೆ ಕ್ಯಾತೆ ರಾಜ್ಯಕ್ಕಿದೇ ಮಹಾ ಚಿಂತೆ!; ಮಹಾರಾಷ್ಟ್ರ ವಿಚಾರದಲ್ಲಿ ಮತ್ತೆಮತ್ತೆ ಎಡವಿದ ರಾಜ್ಯ; ಎಂಇಎಸ್ ಪುಂಡಾಟಿಕೆಗಿಲ್ಲ ಕಡಿವಾಣ

MES
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಮಹಾರಾಷ್ಟ್ರದ ಎಂಇಎಸ್ ಪದೇಪದೆ ರಾಜ್ಯವನ್ನು ಕೆಣಕುತ್ತಿದ್ದರೂ ರಾಜ್ಯ ಸರ್ಕಾರ ಕಾನೂನು ಮತ್ತು ಅಭಿವೃದ್ಧಿಯ ಮೂಲಕ ಹಿಮ್ಮೆಟ್ಟಿಸುವ ವಿಚಾರದಲ್ಲಿ ಎಡವಿದೆ. ಬೆಳಗಾವಿಯಲ್ಲಿ ನಡೆದಿರುವ ಘಟನೆಯನ್ನು ಹಿನ್ನೆಲೆಯಾಗಿಟ್ಟು ನೋಡಿದಾಗ ರಾಜ್ಯ ಸರ್ಕಾರ ನಾಲ್ಕು ವಿಚಾರಗಳಲ್ಲಿ ಎಡವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಇಂತಹ ಪುಂಡಾಟಿಕೆಗಳಿಗೆ ಕಡಿವಾಣ ಹಾಕುವುದು ಕಷ್ಟವಾಗುತ್ತದೆ ಎಂಬ ಅಭಿಪ್ರಾಯ ರಾಜ್ಯದಲ್ಲಿ ಮೂಡಿದೆ. ಮಹಾರಾಷ್ಟ್ರ ಸರ್ಕಾರ ರಾಜ್ಯದ ಬೆಳಗಾವಿ, ಕಾರವಾರ, ಬೀದರ್ ಜಿಲ್ಲೆಗಳ 814 ಹಳ್ಳಿ ಹಾಗೂ ಪಟ್ಟಣಗಳ ಮೇಲೆ ಕಣ್ಹಾಕಿ ಪದೇಪದೆ ಗಡಿ ವಿವಾದ ಕೆದಕುತ್ತಿದೆ. ಅಲ್ಲಿನ ಸರ್ಕಾರ ಯಾವ ರೀತಿಯ ಹೆಜ್ಜೆಯನ್ನಿಟ್ಟಿದೆಯೋ ಎಂಇಎಸ್ ಸಹ ಅದೇ ದಾರಿಯಲ್ಲಿ ಸಾಗುತ್ತಿದೆ ಎಂಬ ಮಾತುಗಳಿವೆ.

ಸರ್ಕಾರ ಎಡವಿರುವುದೆಲ್ಲಿ?: ಮಹಾಜನ ವರದಿ ಮುಗಿದ ಕತೆಯಾದರೂ ಬೆಳಗಾವಿ ಬೇಕೆಂದು ಪದೇಪದೆ ಕೆಣಕುತ್ತದೆ. 2004ರಲ್ಲಿ ಸುಪ್ರೀಂಕೋರ್ಟ್​ಗೆ ಅರ್ಜಿ ಹಾಕಿದೆ. 17 ವರ್ಷಗಳಿಂದ ಆ ಅರ್ಜಿ ವಿಚಾರಣೆಗೇ ಬಂದಿಲ್ಲ. ಅರ್ಜಿ ವಜಾ ಮಾಡಿಸುವ ಪ್ರಯತ್ನ ರಾಜ್ಯದ ಕಡೆಯಿಂದ ಆಗಿಲ್ಲ ಎಂಬ ಅಸಮಾಧಾನ ಇದೆ. ಗಡಿ ಹಾಗೂ ಜಲ ವಿವಾದಗಳ ಕಾನೂನು ಸಮಸ್ಯೆಗಳನ್ನು ಗಮನಿಸಲು ನೇಮಕವಾಗಿರುವ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್, ರಾಜ್ಯದ ಅಡ್ವೋಕೇಟ್ ಜನರಲ್ ಹಾಗೂ ಸುಪ್ರೀಂಕೋರ್ಟ್​ನಲ್ಲಿರುವ ರಾಜ್ಯದ ವಕೀಲರ ತಂಡದ ಜತೆ ಚರ್ಚೆ ನಡೆಸಿ ಮಹಾರಾಷ್ಟ್ರದ ಮುಖ್ಯಮಂತ್ರಿ ಅಥವಾ ಅಲ್ಲಿನ ಸರ್ಕಾರ ಪದೇಪದೆ ವಿವಾದ ಕೆದಕದಂತೆ ಸೂಚನೆ ನೀಡಬೇಕೆಂದು ಸುಪ್ರೀಂಕೋರ್ಟ್ ಮುಂದೆ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ ಆ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಸುಪ್ರೀಂಕೋರ್ಟ್ ಮೂಲಕ ಮಹಾರಾಷ್ಟ್ರ ಸಿಎಂ ಬಾಯಿಗೆ ಬೀಗ ಹಾಕಿಸುವ ಪ್ರಯತ್ನ ಮಾಡಿದ್ದರೆ, ಆ ರಾಜ್ಯದ ಪ್ರೇರಿತ ದುಷ್ಕರ್ವಿುಗಳು ಪದೇಪದೆ ಕೆದಕುವ ಪ್ರಯತ್ನ ಮಾಡುತ್ತಿರಲಿಲ್ಲ ಎಂಬ ಅನಿಸಿಕೆ ಬೆಳಗಾವಿ ಭಾಗದ ಕನ್ನಡಿಗರಲ್ಲಿದೆ.

ಉಸ್ತುವಾರಿ ಸಚಿವರಿಲ್ಲ: ಗಡಿ ಭಾಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಶೇಷವಾಗಿ ಸಚಿವರೊಬ್ಬರಿಗೆ ಜವಾಬ್ದಾರಿ ನೀಡಬೇಕೆಂಬ ಮಾತಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರ ಎಚ್.ಕೆ.ಪಾಟೀಲ್ ಅವರಿಗೆ ಈ ಜವಾಬ್ದಾರಿ ನೀಡಿತ್ತು. ಅವರು ಆಗಾಗ ಬೆಳಗಾವಿಗೆ ಹೋಗಿ ಸಭೆಗಳನ್ನು ನಡೆಸುತ್ತಿದ್ದರು. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರ ಈ ಪ್ರಯತ್ನ ಮಾಡಲಿಲ್ಲ. ಮಹಾರಾಷ್ಟ್ರದಲ್ಲಿ ಇಬ್ಬರು ಸಚಿವರನ್ನು ವಿಶೇಷವಾಗಿ ಗಡಿ ಉಸ್ತುವಾರಿಗೆ ನೇಮಕ ಮಾಡಲಾಗಿದೆ.

ಅಭಿವೃದ್ಧಿಗೆ ಒತ್ತಿಲ್ಲ: ಗಡಿ ಸಂರಕ್ಷಣಾ ಆಯೋಗ ಕಾನೂನು ಹೋರಾಟಕ್ಕೆ ರ್ತಾಕ ಅಂತ್ಯ ಕಾಣಿಸಲು ನಿರ್ಧಾರ ಮಾಡಿದ್ದರೆ, ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಳಗಾವಿ ಗಡಿ ಭಾಗದಲ್ಲಿ ಅಭಿವೃದ್ಧಿಗೆ ಒತ್ತು ನೀಡಲು ನಿರ್ಧರಿಸಿದೆ. ಆದರೆ ಅಭಿವೃದ್ಧಿಗೆ ಸರ್ಕಾರದಿಂದ ಸೂಕ್ತ ಅನುದಾನ ಸಿಗುತ್ತಿಲ್ಲ. ಪ್ರಾಧಿಕಾರ 75 ಕೋಟಿ ರೂ. ಅನುದಾನ ಕೋರಿದೆ. ಆದರೆ ಸರ್ಕಾರ ಕೊಟ್ಟಿರುವುದು 15 ಕೋಟಿ ರೂ. ಮಾತ್ರ.

ಕಚೇರಿ ಸ್ಥಳಾಂತರವಿಲ್ಲ: ಕೆಲವು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡಿ ಅಲ್ಲಿ ಸರ್ಕಾರ ಇದೆ ಎಂಬ ಭಾವನೆಯನ್ನು ಸರ್ಕಾರ ಮೂಡಿಸಬೇಕಾಗಿತ್ತು. ಆದರೆ ಆ ಕೆಲಸ ಆಗುತ್ತಿಲ್ಲ. ವಿಶೇಷವಾಗಿ ಗಡಿ ಸಂರಕ್ಷಣಾ ಆಯೋಗ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗಳು ಬೆಳಗಾವಿಯಲ್ಲಿರಬೇಕಾಗಿದೆ ಎಂಬ ಒತ್ತಡವಿದೆ.

ಬೆಳಗಾವಿ ಕರ್ನಾಟಕದ್ದು: ಬೆಳಗಾವಿಗಾಗಿಯೇ ಮಹಾರಾಷ್ಟ್ರ ಸಾಕಷ್ಟು ಕೆಣಕುತ್ತಿದೆ. ಆದರೆ ಪದೇಪದೆ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂಬುದು ಸ್ಪಷ್ಟವಾಗುತ್ತಿದೆ.

  • 1956ರಲ್ಲಿ ರಾಜ್ಯಗಳ ಪುನಾರಚನೆ ಆಯೋಗ ಬೆಳಗಾವಿಯನ್ನು ಕರ್ನಾಟಕಕ್ಕೆ ಸೇರಿಸಿದೆ.
  • 1966ರಲ್ಲಿ ರಚನೆಯಾಗಿ 1967ರಲ್ಲಿ ವರದಿ ನೀಡಿದ ಮಹಾಜನ್ ಆಯೋಗ ಸಹ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಹೇಳಿದೆ. ಬೆಳಗಾವಿ ಡಿಸಿ ಕಚೇರಿ ದಾಖಲೆಗಳೆಲ್ಲ ಕನ್ನಡದಲ್ಲಿಯೇ ಇವೆ ಎಂಬುದು ದಾಖಲಾಗಿದೆ.
  • ಸಂಸತ್ತಿನಲ್ಲಿ ಬೆಳಗಾವಿ ಸಂಬಂಧಿಸಿದ ನಿಲುವಳಿ ಬಂದಾಗ ಮಹಾರಾಷ್ಟ್ರ ಪರ ಆಗಿಲ್ಲ.
  • 1920ರಲ್ಲಿ ಮುಂಬೈನಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿಯೂ ಕೇಳ್ಕರ್ ಸೇರಿದಂತೆ ಯಾರೊಬ್ಬರೂ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬೇಡಿಕೆ ಮಂಡಿಸಿಲ್ಲ.

ಈಗ ತುರ್ತಾಗಿ ಆಗಬೇಕಾಗಿರುವುದು?

  • ಗಡಿ ಉಸ್ತುವಾರಿ ಸಚಿವರ ನೇಮಕ. ಆ ಸಚಿವರು ಬೆಳಗಾವಿಗೆ ಸೇರಿದವರು ಆಗಬಾರದು.
  • ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ತಕ್ಷಣ ಅಧ್ಯಕ್ಷರ ನೇಮಕ. ಪ್ರಾಧಿಕಾರಕ್ಕೆ ಹೆಚ್ಚಿನ ಹಣ ಕೊಟ್ಟು, ಆ ಭಾಗದ ಗಡಿ ಅಭಿವೃದ್ಧಿಗೆ ಆದ್ಯತೆ.
  • ಮಹಾರಾಷ್ಟ್ರ ಪದೇಪದೆ ಕೆದಕದಂತೆ ಎಚ್ಚರಿಕೆ ಕೊಡುವ ನಿಟ್ಟಿನಲ್ಲಿ ಕಾನೂನು ತಂಡದ ಜತೆ ಚರ್ಚೆ.
  • ಗಡಿ ಸಂರಕ್ಷಣಾ ಆಯೋಗ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗಳು ಬೆಳಗಾವಿಗೆ ಸ್ಥಳಾಂತರ.
  • ಕರ್ನಾಟಕಕ್ಕೆ ಸೇರಬೇಕಾದ ಕೆಲ ಪ್ರದೇಶಗಳನ್ನು ಸೇರಿಸಿಕೊಳ್ಳಲು ಕ್ರಮ.
  • ಗಡಿ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು, ಬಜೆಟ್​ನಲ್ಲಿ ಹೆಚ್ಚಿನ ಅನುದಾನ ನೀಡಿಕೆ.
  • ಬೆಳಗಾವಿಯಲ್ಲಿರುವ ಎಂಇಎಸ್​ಯುೕತರ ಮರಾಠಿಗರನ್ನು ವಿಶ್ವಾಸಕ್ಕೆ ಪಡೆಯುವುದು.
  • ಬೆಳಗಾವಿಗೆ ವಿಶೇಷ ವಾಗಿ ಕನ್ನಡಿಗ ಅಧಿಕಾರಿಗಳ ನೇಮಕ.

ಏನೇನು ಅಭಿವೃದ್ಧಿ?: ಗಡಿ ತಾಲೂಕುಗಳಲ್ಲಿ ಕನ್ನಡ ಶಾಲೆಗಳಿಗೆ ಕಟ್ಟಡ, ವಾಚನಾಲಯ, ಶಿಕ್ಷಕರಿಗೆ ಪ್ರೋತ್ಸಾಹ, ಮೂಲಸೌಕರ್ಯ, ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಒತ್ತು. ಸಂಘ-ಸಂಸ್ಥೆಗಳಿಗೆ ಅನುದಾನ ನೀಡಿ ತಿಂಗಳಿಗೊಂದು ಸಾಂಸ್ಕೃತಿಕ ಕಾರ್ಯಕ್ರಮ. ಸಾಂಸ್ಕೃತಿಕ ಭವನಗಳ ನಿರ್ವಣ. ಗಡಿಭಾಗದಲ್ಲಿ ಮೂಲಸೌಕರ್ಯ.

ನಿರ್ದಾಕ್ಷಿಣ್ಯ ಕ್ರಮಕ್ಕೆ ತಿಳಿಸಿದ್ದೇನೆ

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ಮಿತಿಮೀರಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡದ ನೆಲದಲ್ಲಿ ಇದ್ದುಕೊಂಡು ಯಾರೂ ಉದ್ಧಟತನದಿಂದ ವರ್ತಿಸಬಾರದು. ಭಾಷೆ, ನಾಡಿನ ವಿಚಾರದಲ್ಲಿ ಯಾರೂ ವಿರೋಧಿ ಕೆಲಸ ಮಾಡಬಾರದು. ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿರುವುದು ಅಕ್ಷಮ್ಯ ಅಪರಾಧ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೆ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಯವರಿಗೂ ಹೇಳಿದ್ದೇನೆ ಎಂದರು. ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದರ್ಪ ಮೆರೆಯುವುದಕ್ಕೆ ಸರ್ಕಾರ ಬಿಡುವುದಿಲ್ಲ. ಪದೇಪದೆ ಎಂಇಎಸ್ ಪುಂಡಾಟಿಕೆ ನಡೆಸುತ್ತಾ ಜನರಲ್ಲಿ ಆಶಾಂತಿ ಮೂಡಿಸುವ ಕೆಲಸ ಮಾಡುತ್ತಿದೆ. ಇಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ. ರಾಯಣ್ಣ ಪ್ರತಿಮೆ ಸೇರಿದಂತೆ ಯಾವುದೇ ಮಹನೀಯರ ಪ್ರತಿಮೆ ಹಾನಿ ಮಾಡುವ, ಅಗೌರವ ತೋರಿಸುವ ಕೆಲಸ ಮಾಡಬಾರದು ಎಂದರು.

ದುರುಳರ ಹೆಡೆಮುರಿ ಕಟ್ಟುತ್ತೇವೆ

ಬೆಳಗಾವಿ: ಜಾತಿ, ಭಾಷೆ ಹೆಸರಿನಲ್ಲಿ ಪುಂಡಾಟಿಕೆ, ದೇಶಭಕ್ತರು ಹಾಗೂ ರಾಷ್ಟ್ರೀಯ ನಾಯಕರಿಗೆ ಅಪಮಾನ, ಸಾರ್ವ ಜನಿಕ ಮತ್ತು ಖಾಸಗಿ ಆಸ್ತಿ-ಪಾಸ್ತಿ ನಷ್ಟ ಉಂಟು ಮಾಡುವ ದುರುಳರ ಹೆಡೆಮುರಿ ಕಟ್ಟುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗುಡುಗಿದ್ದಾರೆ. ಬೆಳಗಾವಿಯಲ್ಲಿ ಶುಕ್ರವಾರ ರಾತ್ರಿ ಕಿಡಿಗೇಡಿಗಳ ಗುಂಪೊಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹಾಳುಗೆಡವಿ, ಸರ್ಕಾರಿ ವಾಹನಗಳಿಗೆ ಕಲ್ಲು ತೂರಿದ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಆರಗ, ಈ ದುಷ್ಕೃತ್ಯ ಎಸಗಿದವರ ವಿರುದ್ಧ ಮುಲಾಜಿಲ್ಲದೆ ಕ್ರಮವಹಿಸಲು ಸೂಚಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದು, ಉಳಿದವರ ಶೋಧ ಕಾರ್ಯ ಮುಂದುವರಿಸಿದ್ದಾರೆ. ಘಟನೆಗೆ ಕಾರಣರಾದ ಎಲ್ಲರನ್ನು ಪತ್ತೆ ಹಚ್ಚಿ, ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು. ಸಾರ್ವಜನಿಕರಲ್ಲಿ ಯಾವುದೇ ಭಯ-ಭೀತಿ ಬೇಡವೆಂದು ಅಭಯ ನೀಡಿದ್ದಾರೆ. ಬೆಂಗಳೂರು ಹಾಗೂ ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಈಗಾಗಲೆ ಎಫ್​ಐಆರ್ ದಾಖಲಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ. ರಾಜ್ಯದ ಜನತೆ ಶಾಂತಿ ಹಾಗೂ ಸಾಮರಸ್ಯ ಕಾಪಾಡಲು ಸಹಕರಿಸಬೇಕು ಎಂದು ವಿನಂತಿಸಿದ್ದಾರೆ.

ಸಿಎಂಗೆ ತಿವಿದ ಸಿದ್ದರಾಮಯ್ಯ

ಸಂಗೊಳ್ಳಿ ರಾಯಣ್ಣ ಪ್ರತಿಮೆ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದಾರೆ. ಇದಕ್ಕೆಲ್ಲ ’ಕ್ರಿಯೆಗೆ ಪ್ರತಿಕ್ರಿಯೆ’ ಎಂಬ ಮೊಂಡುವಾದ ಮಂಡಿಸಬೇಡಿ. ಕಾನೂನಿನ ಕ್ರಮ ಇಂತಹ ಪುಂಡರಿಗೆ ಕಠಿಣ ಸಂದೇಶವಾಗಲಿ ಎಂದು ಸಿದ್ದರಾಮಯ್ಯ ಸಿಎಂಗೆ ಬಿಸಿ ಮುಟ್ಟಿಸಿದ್ದಾರೆ. ಕರಾವಳಿಯಲ್ಲಿ ಸಂಘರ್ಷ ಕುರಿತು ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಸಿಎಂ, ’ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಹೇಳಿಕೆ ನೀಡಿದ್ದರು. ಆ ಅಭಿಪ್ರಾಯವನ್ನು ಸಿದ್ದರಾಮಯ್ಯ ಈಗ ಟೀಕೆಗೆ ಬಳಸಿಕೊಂಡಿದ್ದಾರೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆ ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯ. ಈ ಗೂಂಡಾಗಳನ್ನು ತಕ್ಷಣ ಬಂಧಿಸಿ ಜೈಲಿಗಟ್ಟುವಂತೆ ಪೊಲೀಸರಿಗೆ ಆದೇಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ದಾಳಿ ಮಾಡಿರುವುದು ಕನ್ನಡಿಗರ ಮೇಲೆ, ಕರ್ನಾಟಕದ ಮೇಲಿನ ದಾಳಿಗೆ ಸಮ. ಇದು ಕ್ಷಮಾರ್ಹವಲ್ಲದ ಅಪರಾಧ. ಅಂಥ ಶಕ್ತಿಗಳನ್ನು ಸರ್ಕಾರ ಮೂಲೋತ್ಪಾಟನೆ ಮಾಡಬೇಕು. ಪುಂಡರ ಹೆಡೆಮುರಿ ಕಟ್ಟಿ ತಕ್ಕ ಶಾಸ್ತಿ ಮಾಡಬೇಕು. ಮತ್ತೆ ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು.

ಗಡಿ ಭಾಗದಲ್ಲಿ ವಿಶೇಷವಾಗಿ ಹೆಚ್ಚಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಹೆಚ್ಚಿನ ಅನುದಾನ ಕೇಳಿದ್ದೇವೆ. ಸರ್ಕಾರದಿಂದ ಸಿಗುವ ನಿರೀಕ್ಷೆ ಇದೆ. ಅಲ್ಲಿ ಕೆಲವೊಂದು ಅಭಿವೃದ್ಧಿ ಯೋಜನೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡಿಗರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶವಿದೆ.

| ಡಾ.ಸಿ.ಸೋಮಶೇಖರ್ ಅಧ್ಯಕ್ಷರು, ಗಡಿ ಅಭಿವೃದ್ಧಿ ಪ್ರಾಧಿಕಾರ

ಬೆಳಗಾವಿಯಲ್ಲಿ ಸಮಾಜಘಾತುಕ ಶಕ್ತಿಗಳ ಪುಂಡಾಟಿಕೆ ಖಂಡನೀಯ. ಕನ್ನಡದ್ರೋಹಿ, ನಾಡದ್ರೋಹಿ ಕೃತ್ಯವನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ. ಸರ್ಕಾರ ಕೂಡಲೇ ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

| ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ರಾಯಣ್ಣ ಪ್ರತಿಮೆ ವಿಕೃತಗೊಳಿಸಿರುವ ಘಟನೆ ಖಂಡನಾರ್ಹ. ದೇಶಭಕ್ತನಿಗೆ ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ.

| ಗೋವಿಂದ ಕಾರಜೋಳ ಉಸ್ತುವಾರಿ ಸಚಿವ

ಶಾಂತಿ ಸುವ್ಯವಸ್ಥೆ ಕದಡುವಂತಹ ಪುಂಡಾಟಿಕೆ ಸಂವಿಧಾನದ ಮೌಲ್ಯಗಳ ವಿರುದ್ಧವಾಗಿದೆ. ಹೊರ ರಾಜ್ಯದಲ್ಲಿ ಕನ್ನಡಿಗರು ಸೌಹಾರ್ದಕ್ಕೆ ಆದ್ಯತೆ ನೀಡಿ ಬದುಕುತ್ತಿರುವುದು ಇಂತಹ ಕಿಡಿಗೇಡಿಗಳಿಗೆ ಮಾದರಿಯಾಗಬೇಕು ಎಂಬುದು ಬಂಡಾಯ ಸಾಹಿತ್ಯ ಸಂಘಟನೆಯ ಆಶಯವಾಗಿದೆ. ಸರ್ಕಾರ ಹಾಗೂ ಸಮಾಜದ ಮುಖಂಡರು ಸೇರಿ ಶಾಂತಿ, ಸೌಹಾರ್ದಯುತ ವಾತಾವರಣ ನಿರ್ವಣಕ್ಕೆ ಮುಂದಾಗಬೇಕೆಂದು ಸಂಘಟನೆ ಒತ್ತಾಯಿಸುತ್ತದೆ.

| ಪ್ರೊ.ಬರಗೂರು ರಾಮಚಂದ್ರಪ್ಪ ಸಾಹಿತಿ

ಸರ್ಕಾರ ಮೊದಲು ಕಚೇರಿಗಳನ್ನು ಸ್ಥಳಾಂತರ ಮಾಡಲಿ, ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಿ. ಕನ್ನಡ ಸಂಘ- ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲಿ. ಇಲ್ಲಿರುವ ಸಭ್ಯ ಮರಾಠಿಗರನ್ನು ಸೇರಿಸಿಕೊಳ್ಳಲಿ.

| ಅಶೋಕ್ ಚಂದರಗಿ ಕನ್ನಡಪರ ಹೋರಾಟಗಾರ

ಸರ್ಕಾರ ಎಂಇಎಸ್​ನ ಮಹಾಮೇಳಕ್ಕೆ ಮುಂದಿನ ದಿನಗಳಲ್ಲಿ ಅನುಮತಿ ನೀಡಬಾರದು. ಬೆಳಗಾವಿಗೆ ಕನ್ನಡಿಗ ಅಧಿಕಾರಿಗಳನ್ನು ಮಾತ್ರ ನೇಮಕ ಮಾಡಬೇಕು.

| ಪ್ರೊ. ರಾವ್ ಬೈಂದೂರು ಅಧ್ಯಕ್ಷ, ಗಡಿ ಹೋರಾಟ ಸಮಿತಿ

ಭಾಷೆಯ ಹೆಸರನ್ನು ಮುಂದಿಟ್ಟುಕೊಂಡು ಅನಗತ್ಯವಾಗಿ ಇಂದು ಮಹಾರಾಷ್ಟ್ರದ ಗಡಿಪ್ರದೇಶದಲ್ಲಿ ವಿಶೇಷವಾಗಿ ನಮ್ಮ ಹೋಟೆಲುಗಳನ್ನು ಗುರಿಯಾಗಿಟ್ಟುಕೊಂಡು ಪುಂಡಾಟಿಕೆ ಮಾಡಿರುವುದು ಖಂಡನೀಯ. ಆತಿಥ್ಯ ಕ್ಷೇತ್ರದಲ್ಲಿ ಎಲ್ಲ ಭಾಷೆ, ಜಾತಿ, ಮತದವರನ್ನು ಸಮಾನತೆಯಲ್ಲಿ ಕಾಣುವ ನಮ್ಮ ಉದ್ಯಮಕ್ಕೆ ಕಿರುಕುಳ ಕೊಡುವ ದುಷ್ಟಶಕ್ತಿಗಳ ವಿರುದ್ಧ ಅಲ್ಲಿನ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು.

| ಪಿ.ಸಿ.ರಾವ್ ಅಧ್ಯಕ್ಷ, ಬೃಹತ್ ಬೆಂಗಳೂರು ಹೋಟೆಲ್​ಗಳ ಸಂಘ

ನಾವು ರಾಯಣ್ಣನನ್ನು ಗೌರವಿಸುವಂತೆಯೇ ಶಿವಾಜಿಯನ್ನೂ ಗೌರವಿಸುತ್ತೇವೆ. ಅಧಿವೇಶನ ನಡೆಯುತ್ತಿರುವಾಗಲೇ ಪಟ್ಟಭದ್ರ ಹಿತಾಸಕ್ತಿಗಳು ಬೀದಿಗೆ ಇಳಿದಿದೆ. ಸರ್ಕಾರ ಇದನ್ನು ಸಹಿಸುವುದಿಲ್ಲ. ಇಂತಹ ಶಕ್ತಿಗಳ ವಿರುದ್ಧ ತೀಕ್ಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

| ಡಾ. ಅಶ್ವತ್ಥನಾರಾಯಣ್ ಸಚಿವ

ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ರಾಜ್ಯ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಆ ಪುಂಡರನ್ನು ಸೆದೆ ಬಡಿಯಲು ಸರ್ಕಾರ ಬದ್ಧವಿದೆ.

| ಮುರುಗೇಶ ಆರ್. ನಿರಾಣಿ ಸಚಿವ

ಕೆರಳಿದ ಸಂಘಟನೆಗಳು

ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್ ಸಂಘ ಟನೆಯ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಪ್ರತಿಮೆ ಯನ್ನು ಧ್ವಂಸಗೊಳಿಸಿರುವುದು ಹಾಗೂ ಪೊಲೀಸ್ ವಾಹನಗಳ ಮೇಲೆ ದಾಳಿ ನಡೆಸಿರುವುದನ್ನು ಖಂಡಿಸಿ ನಗರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿವೆ. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಆರ್.ಸುಬ್ಬಣ್ಣ ವೃತ್ತದಿಂದ ಮೆಜೆಸ್ಟಿಕ್​ನ ಸಮೀಪ ಸಂಗೊಳ್ಳಿ ರಾಯಣ್ಣ ಪ್ರತಿಮೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕರವೇ ಪ್ರವೀಣ್ ಶೆಟ್ಟಿ ಬಣವು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದೆ. ಕರುನಾಡ ವಿಜಯ ಸೇನೆ ಕಾರ್ಯಕರ್ತರು ಮೆಜೆಸ್ಟಿಕ್ ಬಳಿ ಇರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಎದುರು ಧರಣಿ ನಡೆಸಿದರು. ಟೌನ್​ಹಾಲ್ ಬಳಿ ನೀಲೇಶ್​ಗೌಡ ನೇತೃತ್ವ ದಲ್ಲಿ ಪ್ರತಿಭಟನೆ ನಡೆದಿದ್ದು, ಸಭಾಂಗಣಕ್ಕೆ ನುಗ್ಗಲು ಕನ್ನಡಪರ ಹೋರಾಟಗಾರರು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಅವಕಾಶ ನೀಡದಿದ್ದಾಗ ರಸ್ತೆ ಮೇಲೆ ಕುಳಿತು ಧರಣಿ ನಡೆಸಿದ್ದಾರೆ. ಕೆಲವೆಡೆ ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದರು.

ರಾಜ್ಯ ಸರ್ಕಾರಕ್ಕೆ ಸ್ವಾಭಿಮಾನ ಇದ್ದರೆ ಎಂಇಎಸ್ ನಿಷೇಧಿಸಲಿ. ಎಂಇಎಸ್ ಪುಂಡರು ಗೂಂಡಾಗಿರಿ ಮಾಡುತ್ತಿದ್ದು, ಕನ್ನಡಿಗರ ಸ್ವಾಭಿಮಾನ ಕೆರಳಿಸುತ್ತಿದ್ದಾರೆ. ಕನ್ನಡಿಗರ ಮನೆಗಳಿಗೆ ಬೆಂಕಿ ಹಚ್ಚಿ ಪುಂಡಾಟಿಕೆ ಮಾಡುತ್ತಿದ್ದಾರೆ. ಎಲ್ಲವನ್ನೂ ಸಹಿಸಿಕೊಂಡಿರುವ ಇದು ರಣಹೇಡಿ ಸರ್ಕಾರ.

| ಟಿ.ಎ.ನಾರಾಯಣಗೌಡ ಕರವೇ ಅಧ್ಯಕ್ಷ

ಪ್ರತಿಭಟನೆಗೆ ಮುಂದಾದ ಮರಾಠರ ಮನವೊಲಿಕೆ

ಬೆಂಗಳೂರಿನ ಸ್ಯಾಂಕಿ ಕೆರೆ ಸಿಗ್ನಲ್ ಬಳಿ ಇರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಬಳಿದಿರುವ ಪ್ರಕರಣದ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಮರಾಠ ವೆಲ್​ಫೇರ್ ಅಸೋಸಿಯೇಷನ್​ನ ಸೆಕ್ರೆಟರಿಯೊಬ್ಬರು ಕೊಟ್ಟ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಸುಳಿವು ಸಿಕ್ಕಿದೆ. ಸದ್ಯದಲ್ಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶನಿವಾರ ಮರಾಠ ವೆಲ್​ಫೇರ್ ಅಸೋಸಿಯೇಷನ್​ನ ಕಾರ್ಯಕರ್ತರು ಪ್ರತಿಭಟನೆ ಮಾಡಲು ಮುಂದಾಗಿದ್ದರು. ಅವರನ್ನು ಸದಾಶಿವನಗರ ಠಾಣೆಗೆ ಕರೆತಂದ ಪೊಲೀಸರು ಮನವೊಲಿಸಿ ಕಳುಹಿಸಿದ್ದಾರೆ. ಪ್ರಕರಣದಿಂದ ಎಚ್ಚೆತ್ತುಕೊಂಡ ಪೊಲೀಸರು ಸ್ಯಾಂಕಿ ಕರೆ ಸಿಗ್ನಲ್ ಬಳಿ ಇರುವ ಶಿವಾಜಿ ಪ್ರತಿಮೆಗೆ ಸೂಕ್ತ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಡಿ.15ರಂದು ಶಿವಾಜಿ ಮಾಹಾರಾಜರ ಪ್ರತಿಮೆಗೆ ಮಸಿ ಬಳಿಯಲಾಗಿತ್ತು. ವ್ಯಕ್ತಿ ಒಬ್ಬ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಎರಚುತ್ತಿರುವ ವಿಡಿಯೋ ವೈರಲ್ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net