

ಬೇಲೂರು: ತಾಲೂಕಿನ ಗೆಂಡೇಹಳ್ಳಿ-ಮೂಡಿಗೆರೆ ರಸ್ತೆಯ ಸಿಂಗಾಪುರ-ಮರೂರು ಗ್ರಾಮಗಳ ನಡುವೆ ಹಾದು ಹೋಗಿರುವ ಯಗಚಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮುಖ್ಯರಸ್ತೆಯ ಸೇತುವೆಗೆ ಹೊಂದಿಕೊಂಡಿರುವ ರಸ್ತೆ ಕುಸಿದಿದ್ದು, ಶೀಘ್ರವೇ ದುರಸ್ತಿಗೆ ಮುಂದಾಗಬೇಕು ಎಂದು ಈ ಭಾಗದ ನಾಗರಿಕರು ಆಗ್ರಹಿಸಿದ್ದಾರೆ.
ಬೇಲೂರು ಪಟ್ಟಣದಿಂದ ಸಿಂಗಾಪುರ-ಮರೂರು, ಗೆಂಡೇಹಳ್ಳಿ-ಮೂಡಿಗೆರೆ, ಆಲ್ದೂರು ಮೂಲಕ ಬಾಳೆಹೊನ್ನೂರು-ರಂಭಾಪುರಿ ಪೀಠ, ಶೃಂಗೇರಿಯಂತಹ ಪ್ರವಾಸಿ ತಾಣಗಳಿಗೆ ರಾಜ್ಯದ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಭಾಗಗಳಿಂದ ಮೊಬೈಲ್ ರೂಟ್ ಮ್ಯಾಪ್ ಬಳಸಿ ಇದೇ ರಸ್ತೆ ಮೂಲಕ ದಿನನಿತ್ಯ ನೂರಾರು ವಾಹನಗಳಲ್ಲಿ ಸಾವಿರಾರು ಪ್ರವಾಸಿಗರು ಸಂಚರಿಸುತ್ತಾರೆ. ಅಲ್ಲದೆ ಸಮೀಪದ ಸಾಮಿಲ್‌ಗಳಿಗೆ ಮರ ತುಂಬಿಕೊಂಡು ಬರುವ ಭಾರಿ ತೂಕದ ಲಾರಿಗಳು ಯಗಚಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮುಖ್ಯರಸ್ತೆಯ ಸೇತುವೆಯ ಮೇಲೆಯೇ ಸಂಚರಿಸಬೇಕಿದೆ. ಆದರೆ ಈಗಾಗಲೇ ಸೇತುವೆಗೆ ಹೊಂದಿಕೊಂಡಂತಿರುವ ರಸ್ತೆ ಪಕ್ಕದಲ್ಲಿ ಒಂದು ಬದಿ ಕೆಲ ದಿನಗಳಿಂದ ಬರುತ್ತಿರುವ ಮಳೆಗೆ ಶಿಥಿಲವಾಗಿ ಕುಸಿಯಲಾರಂಭಿಸಿದೆ.
ಅಕಸ್ಮಾತ್ ನೀರು ನಿಂತ ಸಂದರ್ಭ ಅಥವಾ ಕತ್ತಲು ಸಮಯದಲ್ಲಿ ವಾಹನಗಳ ಚಾಲಕರು ಮತ್ತೊಂದು ವಾಹನಕ್ಕೆ ಜಾಗ ಬಿಡಲು ಹೋಗಿ, ಪಕ್ಕದಲ್ಲಿ ಕುಸಿಯುತ್ತಿರುವ ರಸ್ತೆ ಪಕ್ಕಕ್ಕೆ ಹೋದರೆ ಅಪಘಾತ ಕಟ್ಟಿಟ್ಟ ಬುತ್ತಿ. ಅಲ್ಲದೆ ಈ ರಸ್ತೆಯಲ್ಲಿ ಹೆಚ್ಚಾಗಿ ಪ್ರವಾಸಿಗರು, ಅಕ್ಕಪಕ್ಕದ ಗ್ರಾಮಗಳ ಸಾರ್ವಜನಿಕರು ಓಡಾಡುವುದರಿಂದ ಗೊತ್ತಿಲ್ಲದೆ ವಾಹನ ಇಳಿಸಿದರೆ ದೇವರೆ ಗತಿ. ಈ ರಸ್ತೆ ಹಾಳಾಗಿರುವ ಬಗ್ಗೆ ತಾತ್ಕಾಲಿಕವಾಗಿ ರಸ್ತೆಯ ಮುಂಭಾಗದಲ್ಲಿ ನಾಮಫಲಕ ಅಳವಡಿಸಿದರೆ ವಾಹನಗಳ ಚಾಲಕರಿಗೆ ಕಾಣಿಸುವುದರಿಂದ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬಹುದು. ಆದರೆ ಕೆಲಸ ಮಾಡಿಸದೆ ಹಾಗೆಯೇ ಏನಾದರೂ ಬಿಟ್ಟರೆ ಮುಂದಿನ ಕೆಲವೇ ದಿನಗಳ ಮಳೆಗಾಲದಲ್ಲಿ ಇನ್ನಷ್ಟು ಸೇತುವೆ ಹಾಗೂ ಪಕ್ಕದ ರಸ್ತೆ ಕುಸಿಯುವ ಸಾಧ್ಯತೆ ಹೆಚ್ಚಾಗಿದ್ದು, ದುರಂತ ಸಂಭವಿಸುವ ಮುನ್ನ ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಸೇತುವೆ ಮತ್ತು ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.