

ಲಿಂಗಸುಗೂರು: ಹಳ್ಳಿಗಳಲ್ಲಿ ವಾಂತಿ-ಭೇದಿ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಾಕೀತು ಮಾಡಿದರು.
ತಾಲೂಕಿನ ಯರಗುಂಟಿ ಮತ್ತು ಗೊರೇಬಾಳ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿ, ವಾಂತಿ-ಭೇದಿಯಿಂದ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು. ಯರಗುಂಟಿಯಲ್ಲಿ ಅಸ್ವಸ್ಥಗೊಂಡ 80 ಜನರ ಪೈಕಿ 30 ಜನ ಗುಣವಾಗಿದ್ದು, ಉಳಿದವರಿಗೆ ನೀಡಲಾಗುತ್ತಿದೆ.
ಆರೋಗ್ಯ ಕ್ರಮಗಳ ಬಗ್ಗೆ ಮುನ್ನೆಚ್ಚರಿಕೆವಹಿಸಿ ಮುಂದೆ ಇಂತಹ ಪ್ರಕರಣಗಳು ಕಾಣಿಸದಂತೆ ನಿಗಾವಹಿಸಬೇಕು. ಬೋರ್‌ವೆಲ್, ತೆರೆದ ಬಾವಿ ನೀರು ಸೇವನೆಯಿಂದ ವಾಂತಿ-ಭೇದಿ ಕಾಣಿಸಿಕೊಳ್ಳಲು ಕಾರಣವಾಗಿದೆ. ಕೂಡಲೇ ಆರ್‌ಒ ಪ್ಲಾಂಟ್ ದುರಸ್ತಿಗೊಳಿಸಿ ಗ್ರಾಮೀಣರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ತಾಪಂ, ಗ್ರಾಪಂ ಅಧಿಕಾರಿಗಳು ಗಮನ ಹರಿಸಬೇಕೆಂದು ಸೂಚಿಸಿದರು.
ಗೊರೇಬಾಳ ಗ್ರಾಪಂ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಗ್ರಾಪಂ ಸದಸ್ಯರ ಸಭೆ ನಡೆಸಿದರು. ಯರಗುಂಟಿಯಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ನಡೆದ ಮದುವೆ ಸಮಾರಂಭದ ಆಹಾರ ಸೇವನೆಯಿಂದ ವಾಂತಿ ಭೇದಿ ಕಾಣಿಸಿಕೊಂಡಿದೆ ಎಂದು ಗ್ರಾಪಂ ಸಿಬ್ಬಂದಿ ಹೇಳಿದ ಮಾತಿಗೆ ಸಚಿವರು ಗರಂ ಆದರು. ಆಹಾರದಲ್ಲಿ ವ್ಯತ್ಯಾಸವಾಗಿದ್ದರೆ ಒಂದು ಕುಟುಂಬದಲ್ಲಿ ಕಾಣಿಸಬೇಕು ಹೊರತು ಗ್ರಾಮದ 80 ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ ಎಂದರೆ ಏನರ್ಥ, ಕಲುಷಿತ ನೀರು ಸೇವನೆಯೇ ಇದಕ್ಕೆ ಕಾರಣ. ಸಮಸ್ಯೆಗೆ ದಾರಿ ಕಂಡುಕೊಳ್ಳಬೇಕೆ ವಿನಃ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.