ಶಾಂತಿ, ಸಹಬಾಳ್ವೆಯ ಮಾರ್ಗದರ್ಶಿ ಶ್ರೀ ರೇಣುಕಾಚಾರ್ಯರು

45
Published on

ರಾಮನಗರ  : ಯುಗ ಯುಗದಲ್ಲಿ ಅವತರಿಸಿ ಶಾಂತಿ, ಸಾಮರಸ್ಯ, ಸಹಬಾಳ್ವೆಯ ಹಾದಿ ತೋರಿದ ಮಹಾಮಹಿಮರು ಜಗದ್ಗುರು ರೇಣುಕಾಚಾರ್ಯರು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್. ಯೋಗಾನಂದ ತಿಳಿಸಿದರು.

ನಗರದ ಕಂದಾಯ ಭವನದ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವದಲ್ಲಿ ಮಾತನಾಡಿ, ಸಮಾಜದ ಅಸಮಾನತೆಯನ್ನು ತೊಡೆದು ಹಾಕಲು ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಬೋಧಿಸಿ ವೀರಶೈವಧರ್ಮವನ್ನು ನೆಲೆಗೊಳಿಸಿದ ಮಹಾತ್ಮರು ರೇಣುಕಾಚಾರ್ಯರು ಎಂದರು.

ಪರಶಿವನ ಪಂಚಬ್ರಹ್ಮ ಮುಖದಿಂದ ಅವಿರ್ಭವಿಸಿದ ಜಗದ್ಗುರು ಪಂಚಾಚಾರ್ಯರಲ್ಲಿ ಪ್ರಥಮ ಗಣೇಶ್ವರನಾದ ರೇಣುಕಾಚಾರ್ಯರು, ಆಂಧ್ರಪ್ರದೇಶದ ಕೊಲ್ಲಿಪಾಕಿ ಸೋಮೇಶ್ವರ ಲಿಂಗದಿಂದ ಅವಿರ್ಭವಿಸಿ ತಮ್ಮ ಲೀಲೆಯನ್ನು ಭೂಲೋಕದಲ್ಲಿ ನಡೆಸಿದರು. ಯುಗ ಯುಗಗಳ ಹಿಂದೆಯೇ ಸಮಾಜದ ಅಸಮಾನತೆಯನ್ನು ತೊಡೆದು ಹಾಕಲು ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಬೋಧಿಸಿ ವೀರಶೈವಧರ್ಮವನ್ನು ನೆಲೆಗೊಳಿಸಿದ ಮಹಾತ್ಮರು ಎಂದರು.

ಜನಪದ ಲೋಕದ ಕ್ಯೂರೇಟರ್ ಡಾ. ಯು.ಎಂ. ರವಿ ಮಾತನಾಡಿ, ಧರ್ಮ ಸಂಸ್ಕಾರವನ್ನು ನೀಡುವ ಪರಂಪರೆಯ ಮೂಲ ಪ್ರವರ್ತಕರಾಗಿ ಪಂಚಪೀಠ ಸ್ಥಾಪನೆ ಮಾಡಿ ವೀರಶೈವ ಧರ್ಮವನ್ನು ಸಾರಿದರು ಎಂದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ವೀರಶೈವ ಸಂಘದ ತಾಲೂಕು ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ, ತಾಲೂಕು ಮಹಾಸಭಾ ಅಧ್ಯಕ್ಷ ಪೊಲೀಸ್ ಶಂಕರಪ್ಪ, ಮುಖಂಡರಾದ ಎ.ಜೆ. ಸುರೇಶ್, ರುದ್ರದೇವರು, ವಿಭೂತಿಕೆರೆ ಶಿವಲಿಂಗಯ್ಯ, ಡೈರಿ ಮಹೇಶ್, ಐಜೂರು ಜಗದೀಶ್, ರಾ.ಶಿ. ಬಸವರಾಜು, ಶಿವಾನಂದ್, ನಾಗೇಶ್, ಶಂಕರ್, ಗುರುಲಿಂಗಯ್ಯ, ಅಕ್ಕಮಹದೇವಮ್ಮ, ಶಿವಕುಮಾರಸ್ವಾಮಿ, ಸರಸ್ವತಮ್ಮ, ವಿಜಯಕುಮಾರ್, ಯತೀಶ್, ಲೋಕೇಶ್, ಶಿವಕುಮಾರ್, ರೇವಣ್ಣ, ಲೋಕೇಶ್, ಶಿವರಾಜಮ್ಮ, ಶಿವಶಂಕರ್, ಮನು, ಗಿರಿಜಾ, ಶೋಭಾ, ರಾಜಶೇಖರ್ ಇತರರು ಇದ್ದರು.

ನಾಡಹಬ್ಬ ರೀತಿ ಆಚರಣೆ ಕಲಿಯುಗದಲ್ಲಿ ರೇವಣಸಿದ್ಧರಾಗಿ ಧರೆಗೆ ಅವತರಿಸಿ ನಮ್ಮ ರಾಮನಗರ ಜಿಲ್ಲೆಯ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಗುಪ್ತವಾಗಿ 700 ವರ್ಷಗಳು ತಪೋನುಷ್ಠಾನಗಳನ್ನು ಮಾಡಿ ನಮಗೆ ಸದಾ ಅವರ ಆಶೀರ್ವಾದ ಸಿಗುವಂತೆ ಮಾಡಿದ್ದಾರೆ. ಮುಂದಿನ ವರ್ಷದಿಂದ ಜಿಲ್ಲಾ ಕೇಂದ್ರದಲ್ಲಿ ಅದ್ದೂರಿಯಾಗಿ ರೇಣುಕಾಚಾರ್ಯ ಜಯಂತಿ ಆಚರಣೆಯನ್ನು ನಾಡಿನ ಹಬ್ಬದ ರೀತಿಯಲ್ಲಿ ಮಾಡಿ, ಅವರ ಲೋಕಕಲ್ಯಾಣದ ಕಾರ್ಯಗಳನ್ನು ಜನರಿಗೆ, ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಲಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್. ಯೋಗಾನಂದ ತಿಳಿಸಿದರು.

ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ರೇಣುಕಾಚಾರ್ಯರು ಕೊಡುಗೆಯಾಗಿ ನೀಡಿ ವಿಶ್ವ ಬಂಧುತ್ವ ಸಾರಿದ ಅವರ ಧರ್ಮದ ದಶ ಸೂತ್ರಗಳು ಸರ್ವರಿಗೂ ಸರ್ವ ಕಾಲಕ್ಕೂ ಧರ್ಮದ ಹಾದಿಯಲ್ಲಿ ನಡೆಯುವ ದಿಕ್ಕನ್ನು ತೋರಿಸುತ್ತವೆ. ಸಮಾಜದಲ್ಲಿ ಶಾಂತಿ, ಸಹಬಾಳ್ವೆಯನ್ನು ತೋರಿದ ಮಹಾಮಹಿಮರು ರೇಣುಕಾಚಾರ್ಯರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಇಂದು ನಾವು ಮುನ್ನಡೆಯಬೇಕಿದೆ. ಸದಾ ಅವರ ಆಶೀರ್ವಾದ ಶ್ರೀರಕ್ಷೆ ಸರ್ವ ಸಮಾಜಕ್ಕೂ ಸಿಗುವಂತಾಗಲಿ. ಕೆ. ಸತೀಶ್, ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net