ಅನಧಿಕೃತ ಅಂಗಡಿ, ಶೇಡ್‌ಗಳ ತೆರವು

ಯಲಬುರ್ಗಾದಲ್ಲಿ ಬೀದಿಬದಿ ವ್ಯಾಪಾರಸ್ಥರು ಹಾಗೂ ಕೆಲ ವರ್ತಕರ ಅನಧಿಕೃತ ಅಂಗಡಿ ಮತ್ತು ಶೆಡ್‌ಗಳ ತೆರವು ಕಾರ್ಯಾಚರಣೆ ಶನಿವಾರ ನಡೆಯಿತು. ಪಪಂ ಮುಖ್ಯಾಧಿಕಾರಿ ನಾಗೇಶ, ಪಿಎಸ್‌ಐ ವಿಜಯ ಪ್ರತಾಪ ಇತರರಿದ್ದರು.
ಯಲಬುರ್ಗಾದಲ್ಲಿ ಬೀದಿಬದಿ ವ್ಯಾಪಾರಸ್ಥರು ಹಾಗೂ ಕೆಲ ವರ್ತಕರ ಅನಧಿಕೃತ ಅಂಗಡಿ ಮತ್ತು ಶೆಡ್‌ಗಳ ತೆರವು ಕಾರ್ಯಾಚರಣೆ ಶನಿವಾರ ನಡೆಯಿತು. ಪಪಂ ಮುಖ್ಯಾಧಿಕಾರಿ ನಾಗೇಶ, ಪಿಎಸ್‌ಐ ವಿಜಯ ಪ್ರತಾಪ ಇತರರಿದ್ದರು.
Published on

ಯಲಬುರ್ಗಾ: ಪಟ್ಟಣದಲ್ಲಿ ಅನಧಿಕೃತ ಸ್ಥಳದಲ್ಲಿ ನಿರ್ಮಿಸಿದ ಬೀದಿಬದಿ ವ್ಯಾಪಾರಿಗಳು, ಕೆಲ ವರ್ತಕರ ಅಂಗಡಿ ಮತ್ತು ಶೆಡ್‌ಗಳ ತೆರವು ಕಾರ್ಯಾಚರಣೆ ಪಟ್ಟಣ ಪಂಚಾಯಿತಿಯಿಂದ ಶನಿವಾರ ನಡೆಯಿತು.

ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪಪಂ ವಿರುದ್ಧ ಬೀದಿಬದಿ ವ್ಯಾಪಾರಸ್ಥರ ಒಕ್ಕೂಟದಿಂದ ತೆರವು ಕಾರ್ಯಾಚರಣೆ ವಿರೋಧಿಸಿ ಗುರುವಾರ ಧರಣಿ ನಡೆಸಿದ್ದರು. ಆದರೆ, ಜಿಲ್ಲಾಧಿಕಾರಿ ಆದೇಶ ಪಾಲಿಸುವ ನಿಟ್ಟಿನಲ್ಲಿ ಪಪಂ ಮುಖ್ಯಾಧಿಕಾರಿ ನಾಗೇಶ ಅವರು ಸ್ಥಳದಲ್ಲಿ ನಿಂತು ಪೊಲೀಸ್ ಬಂದೋಬಸ್ತ್‌ನಲ್ಲಿ ಅಂಗಡಿ ಮತ್ತು ಶೆಡ್‌ಗಳ ತೆರವು ಕಾರ್ಯಾಚರಣೆ ನಡೆಸಿದರು. ಕೆಲ ವರ್ತಕರು ಹಾಗೂ ವ್ಯಾಪಾರಸ್ಥರು ನಾಗೇಶ ಅವರ ಮನವೊಲಿಕೆಯಿಂದ ಸ್ವಯಂಪ್ರೇರಿತರಾಗಿ ಅಂಗಡಿ ಮುಂದಿರುವ ಶೆಡ್‌ಗಳನ್ನು ತೆರವುಗೊಳಿಸಿ ಕಾರ್ಯಾಚರಣೆಗೆ ಸಹಕರಿಸಿದರು. ಅತಿಕ್ರಮಣ ಮಾಡಿಕೊಂಡ ಚರಂಡಿಗಳಲ್ಲಿ ತುಂಬಿದ್ದ ತ್ಯಾಜ್ಯವನ್ನು ಜೆಸಿಬಿ ಮೂಲಕ ವಿಲೇವಾರಿ ಮಾಡಿದರು. ಕಾರ್ಯಾಚರಣೆಗೆ ವಾಹನ ಸವಾರರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಪಪಂ ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ಪಟ್ಟಣದ ಸೌಂದರ್ಯ ದೃಷ್ಟಿಯಿಂದ ಮತ್ತು ಸಂಚಾರ ದಟ್ಟಣೆ ತಪ್ಪಿಸಿ ಸುಗಮ ಸಂಚಾರದ ಅನೂಕುಲಕ್ಕೆ ಈ ನಿರ್ಧಾರ ಕೈಗೊಂಡು ಸುಪ್ರೀಂಕೋರ್ಟ್ ಆದೇಶ ಪಾಲಿಸಲಾಗುತ್ತಿದೆ. ವ್ಯಾಪಾರಸ್ಥರಿಗೆ ತೊಂದರೆ ನೀಡುವ ಉದ್ದೇಶವಿಲ್ಲ. ಜತೆಗೆ ಯಾರದೋ ಒತ್ತಡಕ್ಕೆ ಮಣಿದು ಕಾರ್ಯಾಚರಣೆ ನಡೆಸುತ್ತಿಲ್ಲ. ಕನಕದಾಸ ವೃತ್ತದಿಂದ ಪ್ರವೀಣ ಚಿತ್ರಮಂದಿರ, ಟಿಪ್ಪು ಸರ್ಕಲ್, ಚನ್ನಮ್ಮ ವೃತ್ತ, ಮುಧೋಳ ರಸ್ತೆ, ತಹಸಿಲ್ ಕಚೇರಿವರೆಗೆ ಚರಂಡಿ ಮೇಲಿರುವ ಅನಧಿಕೃತ ಗೂಡಂಗಡಿಗಳನ್ನು ತೆರವು ಮಾಡಲಾಗುವುದು. ಪಟ್ಟಣದ ಆಯಕಟ್ಟಿನ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ನಿರ್ಮಾಣ ಹಂತದಲ್ಲಿರುವ ಮಾರುಕಟ್ಟೆಯಲ್ಲಿ ಅಗತ್ಯ ಸೌಕರ್ಯ ಕಲ್ಪಿಸಿ ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಲಾಗುವುದು. ಇದಕ್ಕೆ ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು.

ಪಿಎಸ್‌ಐ ವಿಜಯ ಪ್ರತಾಪ ನೇತೃತ್ವದಲ್ಲಿ ತೆರವು ಕಾರ್ಯಾಚರಣೆಗೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 25 ಪೌರ ಕಾರ್ಮಿಕರು, 2 ಜೆಸಿಬಿ, ಟ್ರ್ಯಾಕ್ಟರ್‌ನ್ನು ಬಳಸಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net