ಬ್ಯಾರೇಜ್ ಗೇಟ್ ತೆರವು ಕಾರ್ಯಾಚರಣೆ ಆರಂಭ

Barrage gate clearance operation begins
ವಿಧಾನ ಪರಿಷತ್ ಅಧಿವೇಶನ ಶೂನ್ಯ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಅವರು ಮಾತನಾಡಿದರು.
Published on

ಕಮತಗಿ: ಹುನಗುಂದ ತಾಲೂಕಿನ ಬೇವಿನಾಳ-ಸುರಳಿಕಲ್ಲ ಗ್ರಾಮದ ನಡುವೆ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬ್ರಿಜ್ ಕಂ ಬ್ಯಾರೇಜ್ ಒಡೆದು ರೈತರಿಗೆ ಆಗಿರುವ ತೊಂದರೆ ಬಗ್ಗೆ ವಿಜಯವಾಣಿ ಜೀವನದಿಯೇ ಮುಳುವಾಯಿತಾ? ಎಂಬ ಶಿರ್ಷಿಕೆಯಡಿ ಪ್ರಕಟಿಸಿದ್ದ ವರದಿ ವಿಧಾನ ಪರಿಷತ್‌ನದಲ್ಲಿ ಪ್ರತಿಧ್ವನಿಸಿ, ಸಣ್ಣ ನೀರಾವರಿ ಸಚಿವರು ಉತ್ತರಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷೃದಿಂದ ಬ್ರಿಜ್‌ಗೆ ಹಾಕಿದ್ದ ಗೇಟ್‌ಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ನದಿಯಲ್ಲಿ ಪ್ರವಾಹ ಉಂಟಾಗಿ ಬ್ಯಾರೇಜ್ ಬಲಭಾಗ ಸಂಪೂರ್ಣ ಕಿತ್ತುಹೋಗಿ ರೈತರ ಜಮೀನಿಗೆ ನೀರು ನುಗ್ಗಿ ರೈತರಿಗೆ ಆಗಿರುವ ಸಂಕಷ್ಟದ ಬಗ್ಗೆ ಗುರುವಾರ ವಿಧಾನ ಪರಿಷತ್ ಶೂನ್ಯ ವೇಳೆಯಲ್ಲಿ ಪಿ.ಎಚ್.ಪೂಜಾರ ಅವರು ಪ್ರಸ್ತಾಪಿಸಿ ಸರ್ಕಾರದ ನಿರ್ಲಕ್ಷೃಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ರೈತರು ನೀರಾವರಿ ಕೃಷಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಸರ್ಕಾರ ನದಿಗೆ ಅಲ್ಲಲ್ಲಿ ಬ್ರಿಜ್ ಕಂ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳನ್ನು ಸಮಯಕ್ಕನುಗುಣವಾಗಿ ನಿರ್ವಹಣೆ ಮಾಡದೇ ಬ್ರಿಜ್‌ದಲ್ಲಿಯೇ ಗೇಟ್‌ಗಳನ್ನು ಬಿಟ್ಟಿರುವ ಪರಿಣಾಮದಿಂದ ಲಕ್ಷಾಂತರ ಬೆಲೆಬಾಳುವ ಭೂಮಿ ಮತ್ತು ಬ್ಯಾರೇಜ್ ಹಾಳಾಗಿದೆ. ಈ ರೀತಿಯ ಅವಘಡವಾಗಲು ಕಾರಣವಾದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು ಎಂದು ಸಣ್ಣ ನೀರಾವರಿ ಸಚಿವರಿಗೆ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರು, ಹುನಗುಂದ ತಾಲೂಕಿನ ಮಲಪ್ರಭಾ ನದಿಗೆ ಒಟ್ಟು 20 ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಸುರಳಿಕಲ್ಲ ಮತ್ತು ಬೇವಿನಾಳ ಹತ್ತಿರದ ಬ್ಯಾರೇಜ್‌ನ್ನು 2009-10ರಲ್ಲಿ ನಿರ್ಮಾಣ ಮಾಡಲಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ನದಿಯಲ್ಲಿ ನೀರು ಕಡಿಮೆಯಾಗುತ್ತದೆ. ದನ ಕರುಗಳಿಗೆ ಕುಡಿಯುವುದಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬ್ಯಾರೇಜಗೆ ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಜುಲೈ-ಆಗಸ್ಟ್ ವೇಳೆಯಲ್ಲಿ ನದಿಗೆ ನೀರುವ ಬರುವ ಹಿನ್ನೆಲೆಯಲ್ಲಿ ಗೇಟ್‌ಗಳನ್ನು ತೆರವುಗೊಳಿಸಲಾಗುತ್ತದೆ ಎಂದರು.

ಗೇಟ್ ತೆರವುಗೊಳಿಸಲು ಅಧಿಕಾರಿಗಳು ತೆರಳಿದಾಗ ಅಲ್ಲಿನ ರೈತರು ಬಿಟ್ಟಿಲ್ಲ ಎನ್ನುವ ಮಾಹಿತಿಯು ಇದೆ. ಮಳೆಯಿಂದಾಗಿ ಬೆಣ್ಣ ಹಳ್ಳದಿಂದ ಪ್ರವಾಹ ಉಂಟಾಗಿ 28 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದು ಬಂದಿದೆ. ಪೊಲೀಸರೊಂದಿಗೆ ತೆರಳಿ ಗೇಟ್‌ಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಹಾನಿಯಾಗಿರುವ ಬ್ಯಾರೇಜ್ ಮತ್ತು ತಡೆಗೋಡೆ ಮರು ನಿರ್ಮಾಣಕ್ಕೆ 75 ಲಕ್ಷ ರೂ. ವೆಚ್ಚದಲ್ಲಿ ಕ್ರೀಯಾಯೋಜನೆ ಸಿದ್ದಪಡಿಸಲಾಗಿದೆ ಎಂದು ಸದನಕ್ಕೆ ತಿಳಿಸಿದ್ದಾರೆ.

ಬ್ಯಾರೇಜ ಗೇಟ್ ತೆರವುಗೊಳಿಸುವ ಕಾರ್ಯ ಪ್ರಾರಂಭ

ಇನ್ನು ಸದನದಲ್ಲಿ ವರದಿ ಪ್ರತಿಧ್ವನಿಸುತ್ತಿದ್ದಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಂದಿಗೆ ಬ್ಯಾರೇಜ್ ಸ್ಥಳಕ್ಕೆ ಆಗಮಿಸಿದರು. ಗೇಟ್‌ಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದರು. ಈಗಾಗಲೇ ಒಂದು ಲೇಯರ್ ಗೇಟ್‌ಗಳನ್ನು ತೆಗೆಯಲಾಗಿದ್ದು, ಇನ್ನುಳಿದ ಎರಡು ಲೇಯರ್ ಗೇಟ್‌ಗಳನ್ನು ತೆಗೆಯಬೇಕಾಗಿದೆ.

ನಾಲ್ಕು ಮೀಟರ್ ಎತ್ತರದ ಬ್ಯಾರೇಜ್‌ಗೆ 34 ಕಿಡಕಿಗಳಿದ್ದು, ಮೀಟರ್‌ಗೆ ಒಂದಂತೆ ಒಟ್ಟು ಒಂದು ಕಿಡಕಿಗೆ ನಾಲ್ಕು ಗೇಟ್‌ಗಳನ್ನು ಅಳವಡಿಸಲಾಗುತ್ತಿದೆ. ಬ್ಯಾರೇಜ್‌ಗೆ 112 ಗೇಟ್‌ಗಳಿಗೆ. ಮೂರು ಲೇಯರ್ ಗೇಟ್‌ಗಳನ್ನು ಹಾಕಲಾಗಿತ್ತು. ಈಗಾಗಲೇ ಒಂದು ಲೇಯರ್ ಗೇಟ್‌ಗಳನ್ನು ಮಾನವ ಸಂಪನ್ಮೂಲ ಬಳಸಿಕೊಂಡು ಹೊರಕ್ಕೆ ತಗೆಯಲಾಗಿದೆ. ಇನ್ನುಳಿದ ಎರಡು ಲೇಯರ್ ಗೇಟ್‌ಗಳನ್ನು ತೆಗೆಯಲು ಮಳೆ ಅಡ್ಡಿಯಾಗುತ್ತಿದೆ. ನದಿಯಲ್ಲಿ ನೀರು ಬಹಳಷ್ಟು ಇರುವುದರಿಂದ ವಿಳಂಭವಾಗುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆಯ ವಿಜಯಪುರ ವಿಭಾಗೀಯ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್.ಕೊಳ್ಳಿ, ಹುನಗುಂದ ತಾಲೂಕಾ ಸಣ್ಣ ನೀರಾವರಿ ಇಲಾಖೆಯ ಅಭಿಯಂಯತ ಪ್ರಕಾಶ ನಾಯಿಕ ವಿಜಯವಾಣಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net