

ಗೌರಿಬಿದನೂರು: ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ಎಂದಿಗೂ ಮರೆಯಬಾರದು, ಸದಾ ಸ್ಮರಿಸಬೇಕು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.
ತಾಲೂಕು ಆಡಳಿತ ಹಾಗೂ ಸ್ವಾತಂತ್ರ್ಯ ಸ್ಮಾರಕ ಅಭಿವೃದ್ಧಿ ಸಮಿತಿಯಿಂದ ತಾಲೂಕಿನ ವಿದುರಾಶ್ವತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 87ನೇ ವಿದುರಾಶ್ವತ್ಥ ಹತ್ಯಾಕಾಂಡ ಮತ್ತು ಬಲಿದಾನಗಳ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶ ಸ್ವಾತಂತ್ರ್ಯ ಪಡೆಯಬೇಕಾದರೆ ಹಲವು ಮಹನೀಯರು ಹುತಾತ್ಮರಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. 1938ರ ಏ.25ರಂದು ವಿದುರಾಶ್ವತ್ಥದಲ್ಲಿ ನಡೆದ ಹತ್ಯಾಕಾಂಡ ದಕ್ಷಿಣ ಭಾರತದ ಜಲಿಯನ್‌ವಾಲಾ ಬಾಗ್ ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ದೇಶಾದ್ಯಂತ ಕಿಚ್ಚು ಹೊತ್ತಿಸಿ ಸ್ವಾತಂತ್ರ್ಯ ಹೋರಾಟವನ್ನು ಮತ್ತಷ್ಟು ತೀವ್ರವಾಗಿಸಲು ಉದಾಹರಣೆಯಾಯಿತು. ಆ ದಿನ ನಮ್ಮ ಗೌರಿಬಿದನೂರಿನ ಸ್ವಾತಂತ್ರ್ಯ ಹೋರಾಟಗಾರರು ತ್ರಿವರ್ಣ ಧ್ವಜ ಹಾರಿಸುವ ಮೂಲಕ ಚರಿತ್ರೆಯನ್ನು ಸೃಷ್ಟಿಸಿದರು. ಬ್ರಿಟಿಷರು ನಡೆಸಿದ ಗುಂಡಿನ ದಾಳಿಗೆ ಗರ್ಭಿಣಿಯರು ಸೇರಿ 33 ಮಂದಿ ಹುತಾತ್ಮರಾದರು. ಅವರ ತ್ಯಾಗ, ಬಲಿದಾನವನ್ನು ಸದಾ ಸ್ಮರಿಸಬೇಕು ಎಂದರು.
ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ಮಾತನಾಡಿ, ತ್ಯಾಗ ಬಲಿದಾನಗಳ ಮೂಲಕ ದೊರೆತಿರುವ ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿ ಸ್ವೀಕರಿಸಬಾರದು. ಇತಿಹಾಸ ಅರಿಯದವನು ಭವಿಷ್ಯವನ್ನು ಸೃಷ್ಟಿಸಲಾರ ಎಂಬ ಮಾತಿದೆ. ಆದ್ದರಿಂದ ಪ್ರತಿಯೊಬ್ಬರೂ ಇತಿಹಾಸವನ್ನು ತಿಳಿದುಕೊಂಡು ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.
ನಿವೃತ್ತ ಯೋಧರು ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಾಪಂ ಇಒ ಜಿ.ಕೆ.ಹೊನ್ನಯ್ಯ, ಸ್ವಾತಂತ್ರ ಸ್ಮಾರಕ ಅಭಿವೃದ್ಧಿ ಸಮಿತಿ ಸದಸ್ಯರಾದ ಪ್ರೊ. ನಗರಗೆರೆ ರಮೇಶ್, ಟಿ.ಎನ್. ನಂಜುಂಡಪ್ಪ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎನ್.ಆರ್.ಮಂಜುನಾಥ್, ಕಸಾಪ ತಾಲೂಕು ಅಧ್ಯಕ್ಷ ಜನಾರ್ದನ್ ಮೂರ್ತಿ, ನಿವೃತ್ತ ಯೋಧ ಅಶ್ವತ್ಥನಾರಾಯಣ್, ಕ್ಯಾಪ್ಟನ್ ಸತೀಶ್ ಕುಮಾರ್, ಗ್ರಾಪಂ ಅಧ್ಯಕ್ಷ ಶಿವಶಂಕರಪ್ಪ, ಉಪಾಧ್ಯಕ್ಷೆ ನಾಗಮ್ಮ ಮತ್ತಿತರರು ಹಾಜರಿದ್ದರು.
ವೀರಭೂಮಿ ವಿದುರಾಶ್ವತ್ಥ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿದ ವೀರಭೂಮಿ ವಿದುರಾಶ್ವತ್ಥ. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವ ಉತ್ತರ ಪಿನಾಕಿನಿ ಮಡಿಲಲ್ಲಿರುವ ವಿದುರಾಶ್ವತ್ಥಲ್ಲಿ 87 ವರ್ಷಗಳ ಹಿಂದೆ ಬ್ರಿಟಿಷರು ರಕ್ತದೋಕುಳಿ ಹರಿಸಿದ್ದರು. ಆ ಹತ್ಯಾಕಾಂಡ ತಲೆಮಾರುಗಳ ಜನಮನದಲ್ಲಿ ಮನೆ ಮಾಡಿದೆ. ಅಂದಿನ ಹತ್ಯಾಕಾಂಡದ ಬಗ್ಗೆ ನಮ್ಮ ಜನಪದರು ಲಾವಣಿ ಪದಗಳನ್ನು ಕಟ್ಟಿ ಹಳ್ಳಿ ಹಳ್ಳಿಗೆ ಮುಟ್ಟಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ಸ್ಫೂರ್ತಿ ತುಂಬಿದರು. ಅದರ ಫಲವಾಗಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಾಯಿತು ಎಂದರು.