25ಕ್ಕೆ "ರೆಮಲ್​' ಸೈಕ್ಲೋನ್​ ಭೀತಿ: ಮಾನ್ಸೂನ್​ ಮೇಲೆ ಅಷ್ಟೇನೂ ಪರಿಣಾಮ ಇಲ್ಲ

cyclone
Published on

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಶನಿವಾರ (ಮೇ 25) ಬೆಳಗ್ಗೆ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ ) ಮೂನ್ಸೂಚನೆ ನೀಡಿದೆ.

ಚಂಡಮಾರುತಕ್ಕೆ ಈಗಾಗಲೇ "ರೆಮಲ್​' ಎಂದು ಹೆಸರಿಡಲಾಗಿದೆ.ಚಂಡಮಾರುತ ಪರಿಣಾಮದಿಂದಾಗಿ ಒಡಿಶಾದ ಕರಾವಳಿ ಭಾಗದಲ್ಲಿ ಭಾರಿ ಮಳೆ ತರಲಿದೆ. ಮೇ 21ರಂದು ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಹಂತ ಹಂತವಾಗಿ ಸೈಕ್ಲೋನ್​ ಆಗಿ ಪರಿವರ್ತನೆಯಾಗಲಿದೆ. ಈ ವೇಳೆ ಗಾಳಿಯ ವೇಗ ಜಾಸ್ತಿಯೂ ಇರಲಿದೆ. ಬಾಂಗ್ಲಾದೇಶ,ಪಶ್ಚಿಮ ಬಂಗಾಳದ ಕರಾವಳಿ ಭಾಗಕ್ಕೆ ಮೇ 26ರ ಸಂಜೆ ಸೈಕ್ಲೋನ್​ ಅಪ್ಪಳಿಸುವ ಸಂಭವವಿದೆ. ಹೀಗಾಗಿ, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಈಗಾಗಲೇ ಐಎಂಡಿ ಎಚ್ಚರಿಕೆ ಕೊಟ್ಟಿದೆ.

ಮಾನ್ಸೂನ್​ ಮೇಲೆ ಪರಿಣಾಮವಿಲ್ಲ: 

ಚಂಡಮಾರುತದಿಂದ ನೈಋತ್ಯ ಮಾನ್ಸೂನ್​ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪದಲ್ಲಿ ಮಾನ್ಸೂನ್​ ಇನ್ನಷ್ಟು ವ್ಯಾಪಿಸಲು ಪರಿಸ್ಥಿತಿ ಅನುಕೂಲವಾಗಿದೆ. ಕೆಲ ಸಂದರ್ಭದಲ್ಲಿ ಸೈಕ್ಲೋನ್​ನಿಂದಾಗಿ ಮಾರುತಗಳು ಮುನ್ನಡೆಯಲು ಪೂರಕ ವಾತಾವರಣ ಉಂಟಾಗುತ್ತದೆ.ಇದರಿಂದಾಗಿ ವಾಡಿಕೆಗಿಂತ ಮುನ್ನವೇ ಕೇರಳಕ್ಕೆ ಮಾನ್ಸೂನ್​ ಪ್ರವೇಶಿಸುವ ಸಾಧ್ಯತೆಯೂ ಇರುತ್ತದೆ ಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ವಿಜಯವಾಣಿಗೆ ತಿಳಿಸಿದ್ದಾರೆ.

ಯೆಲ್ಲೋ ಅರ್ಲಟ್​ ಘೋಷಣೆ

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ಕೆಲವೆಡೆ ಮುಂದಿನ ಎರಡು ದಿನ ಧಾರಾಕಾರ ವರ್ಷಧಾರೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಮೈಸೂರಿನಲ್ಲಿ ಮೇ 24ರಂದು ಹಾಗೂ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಮೇ 24ರಿಂದ ಮುಂದಿನ ಎರಡು ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ಘೋಷಿಸಿದೆ. ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ, ದಕ್ಷಿಣ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಗುಡುಗು ಮಿಂಚು ಸಹಿತ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ. ಕರಾವಳಿ ಭಾಗದಲ್ಲಿ ಗಂಟೆಗೆ 40-45 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net