

ಸರಗೂರು: ಯುಗಾದಿ ಹಬ್ಬದ ಅಂಗವಾಗಿ ಏಪ್ರಿಲ್ 9ರಿಂದ 11ರವರೆಗೆ ಮೂರು ದಿನ ನಡೆಯಲಿರುವ ಹಾಲುಗಡ ಹಾಗೂ ಇಟ್ನ ಗ್ರಾಮದ ಚಿಕ್ಕದೇವಮ್ಮನ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ತಾಲೂಕಿನ ಪೊಲೀಸ್ ಕಚೇರಿ ಬಳಿ ಶುಕ್ರವಾರ ಗ್ರಾಮದ ಮುಖಂಡರು, ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ್ ಮಾತನಾಡಿ, ಜನರ ಧಾರ್ಮಿಕ ಭಾವನೆಗಳಿಗೆ ತೊಂದರೆಯಾಗದಂತೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಬೇಕು ಎಂದು ತಿಳಿಸಿದರು.
ಯಾವುದೇ ಅಹಿತಕರ ಘಟನೆ ನಡೆದರೆ ತಪ್ಪಿತಸ್ಥರ ವಿರುದ್ಧ ದೂರು ದಾಖಲು ಮಾಡಲಾಗುವುದು. ಹಾಲುಗಡ ಸುತ್ತಮುತ್ತ ಯಾವುದೇ ಪ್ರಾಣಿಬಲಿ ಮಾಡುವಂತಿಲ್ಲ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾತ್ರಿ ವೇಳೆಯಲ್ಲಿ ದೇವಸ್ಥಾನದ ಮುಂದೆ ರಾತ್ರಿ 10 ಗಂಟೆ ಮೇಲೆ ಮೈಕ್ ಹಾಕುವಂತಿಲ್ಲ, ಮದ್ಯಪಾನ ಮಾರಾಟ ಮಾಡುವುದೂ ಸೇರಿದಂತೆ ಇತರ ಅಕ್ರಮ ಚಟುವಟಿಕೆ ನಡೆದರೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕೊತ್ತೇಗಾಲ ಮತ್ತು ಹಾಲುಗಡ ಮಾರ್ಗವಾಗಿ ದೇವಾಲಯದವರೆಗೆ ಹಾಗೂ ದೇವಸ್ಥಾನದ ಆವರಣದ ಸುತ್ತ ಬ್ಯಾರಿಕೇಡ್ ಇರಿಸಿ, ವಾಹನ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಹಲವು ಸಲಹೆ ಸೂಚನೆಗಳನ್ನು ನೀಡಿದರು. ಕಂದಾಯ ಇಲಾಖೆ ಗ್ರೇಡ್-2 ತಹಸೀಲ್ದಾರ್ ಪರಶಿವಮೂರ್ತಿ, ಮುಜರಾಯಿ ಇಲಾಖೆ ಇಒ ರಘು, ಪಾರುಪತ್ತೇದಾರರಾದ ಮಹದೇವಸ್ವಾಮಿ, ರಾಕೇಶ್‌ಗೌಡ, ಉಪ ತಹಸೀಲ್ದಾರ್ ಸುನೀಲ್, ರವಿಂದ್ರ, ಪಿಡಿ ಚಿನ್ನಸ್ವಾಮಿ, ನಾಗೇಂದ್ರ, ಸಮಿತಿ ಅಧ್ಯಕ್ಷ ದೊಡ್ಡವೀರನಾಯಕ, ಇಟ್ನ ಗ್ರಾಪಂ ಅಧ್ಯಕ್ಷ ಜಯರಾಮ, ಉಪಾಧ್ಯಕ್ಷೆ ಗೌರಮ್ಮ ಚಿಕ್ಕಣ್ಣ, ಗ್ರಾಪಂ ಸದಸ್ಯ ಎನ್.ಬಸವನಾಯಕ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ಕಾಳಲಿಂಗನಾಯಕ, ನಾಗರಾಜು, ಬೆಟ್ಟನಾಯಕ, ಯಜಮಾನರು ಸೋಮಣ್ಣ, ಮಾಜಿ ಗ್ರಾಪಂ ಸದಸ್ಯ ಚಿಕ್ಕಣ್ಣ, ಬಸಪ್ಪ ತುಂಬಸೋಗೆ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಇಟ್ನ ರಾಜಣ್ಣ, ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ನಾಗೇಂದ್ರ, ಅಣ್ಣಯ್ಯಸ್ವಾಮಿ ಮತ್ತಿತರರು ಹಾಜರಿದ್ದರು.