

ಕಿಕ್ಕೇರಿ: ಮಾನಸಿಕ ಕ್ಲೇಶ ದೂರಸರಿಸಲು ಇರುವುದೊಂದೆ ಮಾರ್ಗ ಅದು ಭಗವಂತನ ಆರಾಧನೆ ಎಂದು ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಸೂರ್ಯನಾರಾಯಣ ತಿಳಿಸಿದರು.
ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಭವನದಲ್ಲಿರುವ ಸಿದ್ದರೂಢಸ್ವಾಮಿ ಮಠದಲ್ಲಿ ಸೋಮವಾರ ರಾತ್ರಿ ಜರುಗಿದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪವಾಡ ಪುರುಷ ಸಿದ್ದರೂಢರು ತಮ್ಮ ಕ್ಷೇತ್ರ ಪರ್ಯಟನೆ ಕಾಲದಲ್ಲಿ ಗ್ರಾಮಕ್ಕೆ ಬಂದು ಹೋಗಿರುವ ಪುಣ್ಯ ತಾಣ ಇದಾಗಿದೆ. ಸಿದ್ದರೂಢರ ಹೆಸರಿನಲ್ಲಿ ಓಂ ನಮಃ ಶಿವಾಯ ಎಂದು ಬೀಜಾಕ್ಷರ ಮಂತ್ರ ಪಠಿಸಿದರೆ ನೆಮ್ಮದಿ ಸಿಗಲಿದೆ ಎಂಬ ಅನುಭವದ ಮಾತು ಭಕ್ತರಲ್ಲಿದೆ. ಇದನ್ನು ಪಾಲಿಸಿದರೆ ಖಚಿತವಾಗಿ ಸುಖ, ಶಾಂತಿ ಲಭಿಸಲಿದೆ ಎಂದರು.
ಸಮಾಜದ ಕಾರ್ಯದರ್ಶಿ ಉಮೇಶ್ ಮಾತನಾಡಿ, ಧನುರ್ಮಾಸ ಕಾಲದಲ್ಲಿ ಮಠದಲ್ಲಿ ನಡೆಯುವ ಪೂಜಾರಾಧನೆ ಭಗವಂತನ ನೇರವಾಗಿ ಒಲಿಸಿಕೊಳ್ಳಬಹುದಾದ ಮಾಸವಾಗಿದೆ. ಭಗವಂತನಿಗೆ ಬೇಕಿರುವುದು ನಿರಾಡಂಭರ ಪೂಜಾರಾಧನೆ ಎಂಬುದನ್ನು ಅರಿತು ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಿ ಎಂದು ನುಡಿದರು.
ಸಿದ್ದರೂಢರ ಭಾವಚಿತ್ರಕ್ಕೆ ಪುಷ್ಪಮಾಲೆಗಳಿಂದ ಶೃಂಗರಿಸಿ, ಧೂಪ, ದೀಪದಾರತಿ ಬೆಳಗಲಾಯಿತು. ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು.
ಮಾದೇಗೌಡ, ಕೃಷ್ಣಶೆಟ್ಟಿ, ಬಾಲಣ್ಣ, ವಿನೂಣ, ಗಾಯಿತ್ರಿ ಮತ್ತಿತರರಿದ್ದರು,