ದೈವ ಪರಿಚಾರಕರಿಗೆ ಗೌರವಾರ್ಪಣೆ ಮಾದರಿ : ಬಡಾಜೆ ರವಿಶಂಕರ ಶೆಟ್ಟಿ ಮೆಚ್ಚುಗೆ

12
Published on

ಬಂಟ್ವಾಳ: ತುಳುನಾಡಿನಲ್ಲಿ ದೈವಾರಾದನೆ ಜತೆಗೆ ಕೃಷಿ ಪರಂಪರೆ ಮತ್ತು ತೌಳವ ಸಂಸ್ಕೃತಿ ಜಿಲ್ಲೆಯ ವೈಶಿಷ್ಟ್ಯ ಸಾರುತ್ತದೆ. ದೈವ ಪರಿಚಾರಕರನ್ನು ಗುರುತಿಸಿ ಸನ್ಮಾನಿಸುವುದರ ಜತೆಗೆ ಅವರಿಗೆ ತಲಾ 10 ಲಕ್ಷ ರೂ. ಮೊತ್ತದ ಜೀವ ವಿಮೆ ನೀಡುತ್ತಿರುವ ಬಲವಂಡಿ ಕ್ಷೇತ್ರದ ನಡೆ ಇತರರಿಗೆ ಮಾದರಿ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಬಡಾಜೆ ರವಿಶಂಕರ ಶೆಟ್ಟಿ ಹೇಳಿದರು. ಅರಳ ಗ್ರಾಮದ ಮಾವಂತೂರು ಬಲವಂಡಿ ಪಿಲ್ಚಂಡಿ ಕ್ಷೇತ್ರದಲ್ಲಿ ಗುರುವಾರ ಸಂಜೆ ಧಾರ್ಮಿಕ ಸಭೆಯಲ್ಲಿ ದೈವ ಪರಿಚಾರಕರನ್ನು ಸನ್ಮಾನಿಸಿ ಮಾತನಾಡಿದರು. ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಪೆರಾರ ಬಲವಂಡಿ ಮುಕ್ಕಾಲ್ದಿ ಅಳಿಕೆ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಗಡಿಪ್ರಧಾನ ಎಂ.ದುರ್ಗಾದಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಅರಳ ಕ್ಷೇತ್ರದ ಮೊಕ್ತೇಸರ ಅಗ್ಗೊಂಡೆ ಜಗದೀಶ ಆಳ್ವ, ಮೊಕ್ತೇಸರ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ಬಲವಂಡಿ ಕ್ಷೇತ್ರದ ಟ್ರಸ್ಟಿ ಚಂದ್ರಶೇಖರ ಶೆಟ್ಟಿ ಮಾವಂತೂರು, ಪುರೋಹಿತ ರಾಜಾರಾಮ ಭಟ್, ಪ್ರತಾಪಚಂದ್ರ ಶೆಟ್ಟಿ, ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುವಾರ್ ಬೆಟ್ಟು, ನೆಕ್ಕರೆಗುಳಿ ಶ್ರೀ ಅಯ್ಯಪ್ಪ ಮಂದಿರದ ದೇವಪ್ಪ ಕರ್ಕೇರ ಮತ್ತಿತರರಿದ್ದರು. 50 ವರ್ಷಗಳಲ್ಲಿ ದೈವ ಪರಿಚಾರಕರಾಗಿ ಗುರುತಿಸಿಕೊಂಡ ರಾಯಿ,  ಅರಳ ಗ್ರಾಮಗಳ ದೈವಪರಿಚಾರಕರಿಗೆ ಸನ್ಮಾನ ಮತ್ತು ಜೀವವಿಮೆ ನೋಂದಣಿ ನಡೆಸಲಾಯಿತು. ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಸ್ವಾಗತಿಸಿದರು.

ರಜತ ಕುದುರೆ ಬಂಡಿ ಮೆರವಣಿಗೆ

ಕೊಲ ಶಾರದೋತ್ಸವ ಮೈದಾನದಿಂದ ನಡೆದ ರಜತ ಕುದುರೆ ಬಂಡಿ ಮೆರವಣಿಗೆಗೆ ಕಟೀಲು ಕ್ಷೇತ್ರದ ಕಮಲಾದೇವಿ ಆಸ್ರಣ್ಣ ಮತ್ತು ಜೋತಿಷಿ ಶಶಿಕುವಾರ್ ಪಂಡಿತ್ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಚಿಲಿಪಿಲಿ ಗೊಂಬೆ, ವಿವಿಧ ಭಜನಾ ತಂಡ, ಚೆಂಡೆ, ಕೊಂಬು, ವಾದ್ಯ, ಸಮವಸ್ತ್ರಧಾರಿ ಮಹಿಳೆಯರು ಗಮನಸೆಳೆದರು. ಅರಳ ಗ್ರಾಮದ ಮಾವಂತೂರು ಬಲವಂಡಿ ಪಿಲ್ಚಂಡಿ ಕ್ಷೇತ್ರಕ್ಕೆ ‘ರಜತ ಕುದುರೆ ಬಂಡಿ’ ಮೆರವಣಿಗೆ ಗುರುವಾರ ಸಂಜೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net