ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಜೈನ ಧರ್ಮ ಸಾರ

naravi
ನಾರಾವಿಯಲ್ಲಿ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಕಳ ಜೈನಮಠದ ಲಲಿತಕೀರ್ತಭಟ್ಟಾರಕ ಸ್ವಾಮೀಜಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಶಿಶುಪಾಲ ಜೈನ್ ಮುಂತಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಜೈನಧರ್ಮ ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಠ ಧರ್ಮವಾಗಿದ್ದು ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂಬುದು ಜೈನಧರ್ಮದ ಸಾರವಾಗಿದೆ ಎಂದು ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಹೇಳಿದರು.

ನಾರಾವಿಯಲ್ಲಿ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾಪನಾ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು.

ಕಾರ್ಕಳ ಜೈನಮಠದ ಲಲಿತಕೀರ್ತಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಸಮವಸರಣದ ಪ್ರತೀಕವಾದ ಬಸದಿಗಳು ನಮ್ಮನ್ನು ನಾವು ತಿದ್ದಿಕೊಂಡು ಸುಧಾರಣೆ ಮಾಡಲು ಪ್ರೇರಣೆ ನೀಡುತ್ತವೆ. ಶ್ರದ್ಧಾಭಕ್ತಿಯಿಂದ ನಿತ್ಯವೂ ಬಸದಿಗೆ ಹೋಗಿ ಏಕಾಗ್ರತೆಯಿಂದ ದೇವರ ದರ್ಶನ, ಜಪ, ತಪ, ಧ್ಯಾನ ಮಾಡಿದಾಗ ಆತ್ಮಕಲ್ಯಾಣವಾಗುತ್ತದೆ ಎಂದು ಹೇಳಿ ಶ್ರಾವಕರು, ಶ್ರಾವಕಿಯರು ಹಾಗೂ ದಾನಿಗಳೆಲ್ಲ ಸೇರಿ ಒಗ್ಗಟ್ಟಿನಿಂದ ಬಸದಿ ಜೀರ್ಣೋದ್ಧಾರ ಮಾಡಿದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಚಾರ-ವಿಚಾರ, ನೇರ ನಡೆ-ನುಡಿ ಹಾಗೂ ನಾಯಕತ್ವ ಗುಣದಿಂದಾಗಿ ಸಮಾಜದಲ್ಲಿ ಜೈನರಿಗೆ ವಿಶೇಷ ಮಾನ್ಯತೆ, ಗೌರವ ಇದೆ. ಜೈನರು ವ್ರತ-ನಿಯಮಗಳ ಪಾಲನೆಯೊಂದಿಗೆ ಆದರ್ಶ ಹಾಗೂ ಸಾತ್ವಿಕ ಜೀವನ ನಡೆಸುತ್ತಿದ್ದಾರೆ. ಬದುಕು ಮತ್ತು ಬದುಕಲು ಬಿಡು ಎಂಬುದು ಜೈನಧರ್ಮದ ಶ್ರೇಷ್ಠ ತತ್ವವಾಗಿದೆ ಎಂದರು.

ಶಿಶುಪಾಲ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಜಿರೆಯ ಮಹಾವೀರ ಜೈನ್ ಇಚಿಲಂಪಾಡಿ ಧಾರ್ಮಿಕ ಉಪನ್ಯಾಸ ನೀಡಿದರು.ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ನಾರಾವಿ ಗ್ರಾಪಂ ಅಧ್ಯಕ್ಷ ರಾಜವರ್ಮ ಜೈನ್, ಆಡಳಿತ ಸಮಿತಿ ಕಾರ್ಯಾಧ್ಯಕ್ಷ ಪ್ರೇಮ್ ಕುಮಾರ್ ಹೊಸ್ಮಾರು, ಅಧ್ಯಕ್ಷ ನಿರಂಜನ ಆಜ್ರಿ, ಎಂ.ಕೆ.ಆರಿಗ ಮರೋಡಿ ಮತ್ತು ಹಷೇರ್ಂದ್ರ ಕುಮಾರ್ ನೂರಾಳಬೆಟ್ಟು ಉಪಸ್ಥಿತರಿದ್ದರು.

ಬಸದಿಯಲ್ಲಿ ಇಂದ್ರ ಪ್ರತಿಷ್ಠಾಪನೆ, ತೋರಣ ಮುಹೂರ್ತ, ವಿಮಾನಶುದ್ಧಿ, ವಾಸ್ತುಪೂಜೆ, ಕ್ಷೇತ್ರಪಾಲ ಪ್ರತಿಷ್ಠಾಪನೆ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆಯಿತು. ಸೇವಾಕರ್ತೃಗಳನ್ನು ಮತ್ತು ದಾನಿಗಳನ್ನು ಗೌರವಿಸಲಾಯಿತು. ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತಕುಮಾರ್ ಜೈನ್ ಸ್ವಾಗತಿಸಿ, ಕರುಣಾಕರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net