ಸಂಸ್ಕೃತಿ, ಪರಂಪರೆಯಿಂದ ಮನುಕುಲಕ್ಕೆ ಶಕ್ತಿ

hrr shree
Published on

ಹರಿಹರ: ದೇಶದ ಸಂಸ್ಕೃತಿ ಮತ್ತು ಪರಂಪರೆಯಿಂದ ಮಾತ್ರ ಮಾನವ ಕುಲಕ್ಕೆ ಶಕ್ತಿ ತುಂಬಲು ಸಾಧ್ಯ ಎಂಬುದನ್ನು ಇಡೀ ಜಗತ್ತೇ ಒಪ್ಪಿಕೊಳ್ಳುತ್ತಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ಜೆ.ಸಿ.ಬಡಾವಣೆಯ ಶ್ರೀ ಮಹಾ ತಪಸ್ವಿ ಫೌಂಡೇಶನ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಉಜ್ಜಯನಿ ಲಿಂ.ಸಿದ್ದಲಿಂಗ ಜಗದ್ಗುರುಗಳ 89ನೇ ಪುಣ್ಯಾರಾಧನೆ ಧರ್ಮ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಭಾರತವನ್ನು ಹಾವಾಡಿಗರ ಮತ್ತು ಭಿಕ್ಷುಕರ ದೇಶವೆಂದು ಅನೇಕ ಮುಂದುವರಿದ ರಾಷ್ಟ್ರಗಳು ವ್ಯಾಖ್ಯಾನ ಮಾಡುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಅದೇ ದೇಶದವರು ಹಿಂದು ಧರ್ಮ ಒಪ್ಪಿ ಆಚರಣೆ ಮಾಡುತ್ತಿದ್ದಾರೆ. ಇದು ನಮ್ಮ ಧರ್ಮದ ಶಕ್ತಿ. ಮತ್ತೊಮ್ಮೆ ಭಾರತ ವಿಶ್ವಗುರುವಾಗುವ ಕಾಲ ದೂರವಿಲ್ಲ ಎಂದರು.

ಸಾಹಿತಿ ಪೊ›.ಎಚ್.ಎ.ಭಿಕ್ಷಾವರ್ತಿಮಠ ವಿಶೇಷ ಉಪನ್ಯಾಸ ನೀಡಿ, ದೇಶದ ದೊಡ್ಡ ಶಕ್ತಿ ಎಂದರೆ ಧರ್ಮ, ಅದು ಮಾನವೀಯ ಧರ್ಮ. ನೊಂದ ಜೀವಿಗಳಿಗೆ ಸಾಂತ್ವನ ಹೇಳುವುದೇ ನಿಜವಾದ ಧರ್ಮ ಎಂಬ ಪರಿಕಲ್ಪನೆಯಲ್ಲಿ ನಾವು ಬದುಕಬೇಕಿದೆ. ಆದರೆ ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ನೋವಿನ ಸಂಗತಿ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯು ಶಕುಂತಲಮ್ಮ ಗುರುಸಿದ್ದಯ್ಯ ಮಾತನಾಡಿ, ಯುವ ಜನತೆ ಭವಿಷ್ಯದ ಭಾರತ ನಿರ್ವಣಕ್ಕಾಗಿ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಸಂಸ್ಕೃತಿಯ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.

ಅವಧೂತ ಕವಿರಾಜ ಗುರೂಜಿ ಮಾತನಾಡಿ, ಸೇವೆಯೇ ಧರ್ಮದ ಮೂಲ ಎನ್ನುವ ದೃಷ್ಟಿಯಲ್ಲಿ ನಮ್ಮ ಸಂಸ್ಥೆ ಕಳೆದ 9 ವರ್ಷಗಳಿಂದ ದೇಶ ವಿದೇಶಗಳಲ್ಲಿ ಶಾಖೆಗಳನ್ನು ತೆರೆದು ಧಾರ್ವಿುಕ ಕಾರ್ಯಕ್ರಮ ನಡೆಸುತ್ತಿದೆ ಎಂದರು.

ತಾಲೂಕಿನ ಹಿರಿಯ ಸಮಾಜ ಸೇವಕ ಎನ್.ಜಿ.ನಾಗನಗೌಡ್ರು ಅವರಿಗೆ ವರ್ಷದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಗರಸಭೆ ಉಪಾಧ್ಯಕ್ಷ ಎಂ.ಜಂಬಣ್ಣ, ಸದಸ್ಯ ಎಬಿಎಂ.ವಿಜಯಕುಮಾರ್, ಮಹಾತಪಸ್ವಿ ಫೌಂಡೇಶನ್​ನ ಉಪಾಧ್ಯಕ್ಷರಾದ ಪೊ›.ಸಿ.ವಿ.ಪಾಟೀಲ್, ಎನ್.ಇ.ಸುರೇಶ್ ಸ್ವಾಮಿ, ನಾಗರಾಜ್ ಕೋಡಿಹಳ್ಳಿ, ವೀರೇಶ್ ಅಜ್ಜಣ್ಣನವರ್, ಭರತ್, ವಿನಯ್, ಧನರಾಜ್ ಚೇತನ್, ಅಂಬುಜಾ ರಾಜೊಳ್ಳಿ, ಸುನಿತಾ, ಶಾಂತಕುಮಾರಿ, ಐಶ್ವರ್ಯ, ಎನ್.ಎಸ್.ವೀರೇಶ್ ಅಂಚಿನಾಳ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net