ನೀರಾವರಿ ಸಮಸ್ಯೆಗೆ ಎಚ್‌ಡಿಕೆಯಿಂದ ಮುಕ್ತಿ

MLA
Published on

ಮಾಗಡಿ  ಮೇಕೆದಾಟು ಯೋಜನೆಗೆ ವರ್ಷದೊಳಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಂಗಾಮಿ ಪ್ರಧಾನಿ ಮೋದಿ ಅವರನ್ನು ಕರೆಯಿಸಿ ಭೂಮಿಪೂಜೆ ಮಾಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಲೇವಡಿ ಮಾಡಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನನ್ನು ಗೆಲ್ಲಿಸಿದ್ರೆ ರಾಜ್ಯದ ಜ್ವಲಂತ ನೀರಾವರಿ ಸಮಸ್ಯೆಗಳನ್ನು ಪ್ರಧಾನಿ ಮೋದಿ ಅವರ ಗಮನಕ್ಕೆ ತಂದು ಬಗೆಹರಿಸುವುದಾಗಿ ಹಾಗೂ ತಮಿಳುನಾಡು ಸಿಎಂ ಜತೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಾಮೀಲಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಡುತಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಈಗ ಅವರು ಮಂಡ್ಯ ಸಂಸದರಾಗಿದ್ದಾರೆ.

ಈ ಸಮಸ್ಯೆ ಬಗ್ಗೆ ಪ್ರಧಾನಿಗೆ ತಿಳಿಸಿ ತಮಿಳುನಾಡಿಗೆ ಹರಿದುಹೋಗುವ ಕಾವೇರಿ ನೀರನ್ನು ಬಂದ್ ಮಾಡಿಸುತ್ತಾರೆ. ಇನ್ನೆರಡು ವರ್ಷದಲ್ಲಿ ರಾಜ್ಯದ ಎಲ್ಲ ಜ್ವಲಂತ ನೀರಾವರಿ ಸಮಸ್ಯೆಗೆ ಎಚ್‌ಡಿಕೆಯಿಂದ ಮುಕ್ತಿ ಸಿಗಲಿದೆ ಎಂಬ ಆಶಾ ಭಾವನೆ ಇಟ್ಟುಕೊಂಡಿದ್ದೇನೆ. ಸೋಲಿನಿಂದ ಒಂದೆಡೆ ಬೇಸರವಾಗಿದ್ದರೆ ಮತ್ತೊಂದೆಡೆ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಖುಷಿಯಾಗಿದೆ ಎಂದು ವ್ಯಂಗ್ಯವಾಡಿದರು.

ಸಹಕಾರ ನೀಡದ ನೋವು: ಪರಾಜಿತ ಅಭ್ಯರ್ಥಿ ಡಿ.ಕೆ.ಸುರೇಶ್ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರನ್ನು ಬಲಿಷ್ಠಗೊಳಿಸಿ ನಮ್ಮನ್ನು ಶಾಸಕರನ್ನಾಗಿ ಮಾಡಿದರು. ಆದರೆ, ಈಗ ನಾವು ಅವರನ್ನು ಸೋಲಿಸಿದ್ದೇವೆ. ಡಿಕೆಸು ನಮಗೆ ನೀಡಿದ ಸಹಕಾರ ನಾವು ಅವರಿಗೆ ಕೊಡಲಿಲ್ಲವೇನೋ ಎಂಬ ನೋವು ನಮಗಿದೆ ಎಂದು ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.

ಡಾಕ್ಟರ್ ಗೆಲುವು ಅನಿರೀಕ್ಷಿತ ತೀರ್ಪು: ಡಾ.ಸಿ.ಎನ್. ಮಂಜುನಾಥ್ ಅವರು ಜನರಿಗೆ ಹಾಗೂ ರಾಜಕೀಯದಲ್ಲಿ ಹೊಸ ಮುಖ, ಅವರು ನಾಮಪತ್ರ ಸಲ್ಲಿಕೆಯಿಂದ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಅವರ ಬಗ್ಗೆ ನೀಡಿದ ಹೆಚ್ಚು ಪ್ರಚಾರದಿಂದ ಗೆಲ್ಲಲು ಸಹಕಾರಿಯಾಗಿದೆ. ಇದು ಅನಿರೀಕ್ಷಿತ ತೀರ್ಪು, ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದರು.

ಶಾಸಕರ ಬಾಯಿ ಮುಚ್ಚಿಸಲಿ  ಹೇಮಾವತಿ ಎಕ್ಸ್‌ಪ್ರೆಸ್ ಕಾಮಗಾರಿ ಆರಂಭದ ವೇಳೆ ಬೋಗಸ್ ಕಾಮಗಾರಿ, ಡಿ.ಕೆ.ಸುರೇಶ್ ದುಡ್ಡು ಹೊಡೆಯಲು ಮಾಡಿರುವ ಕಾಮಗಾರಿ, ಎಕ್ಸ್‌ಪ್ರೆಸ್ ಕೆನಾಲ್ ಅಗತ್ಯವಿಲ್ಲ ಎಂದಿದ್ದರು. ಈಗ ನಾನೇ ನೂತನ ಸಂಸದರ ನೇತೃತ್ವದಲ್ಲಿ ಸಿಎಂ, ಡಿಸಿಎಂ ಬಳಿ ಕರೆದೊಯ್ದು ತಾಲೂಕಿಗೆ ನೀರು ಹರಿಸುವುದಾಗಿ ಮಾಜಿ ಶಾಸಕರು ಹೇಳಿದ್ದಾರೆ. ಸಿಎಂ, ಡಿಸಿಎಂ ರಿಂದ ಈಗಾಗಲೇ ಡಿ.ಕೆ.ಸುರೇಶ್ ಅವರು ಕೆನಾಲ್‌ಗೆ ಮಂಜೂರಾತಿ ಕೊಡಿಸಿ ಟೆಂಡರ್ ಮುಗಿದು ಕೆಲಸ ಪ್ರಾರಂಭವಾಗಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಂದ ತುರುವೇಕೆರೆ ಶಾಸಕರನ್ನು, ನೂತನ ಸಂಸದರಿಂದ ಸುರೇಶ್‌ಗೌಡ, ಸೊಗಡು ಶಿವಣ್ಣ ಅವರ ಬಾಯಿ ಮುಚ್ಚಿಸಿ ಕಾಮಗಾರಿಗೆ ಸಹಕರಿಸಲಿ ಎಂದು ಮಾಜಿ ಶಾಸಕ ಎ.ಮಂಜುನಾಥ್‌ಗೆ ಟಾಂಗ್ ನೀಡಿದರು. ಪುರಸಭಾ ಸದಸ್ಯರಾದ ರಂಗಹನುಮಯ್ಯ, ಮಾಜಿ ಸದಸ್ಯ ಚಂದ್ರಶೇಖರ್, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ್, ತಾಪಂ ಮಾಜಿ ಸದಸ್ಯೆ ಸುಮಾ ರಮೇಶ್ ಇತರರು ಇದ್ದರು.

ಗ್ಯಾರಂಟಿ ಬೇಡ, ಅಭಿವೃದ್ಧಿ ಬೇಕು  ಕೇಂದ್ರ ಸರ್ಕಾರ ಬದಲಾವಣೆ ಆಗಬಹುದು. ಆದರೆ, ರಾಜ್ಯ ಸರ್ಕಾರ ಬದಲಾವಣೆಯಾಗುವುದಿಲ್ಲ. ಗ್ಯಾರಂಟಿಗಳಿಗೆ ಜನ ಕೈ ಹಿಡಿದಿಲ್ಲ. ಗ್ಯಾರಂಟಿಗಳನ್ನು ಮುಂದುವರಿಸುವುದು ಬೇಕಾ, ಬೇಡ್ವಾ ಎಂದು ಸಿಎಂ, ಡಿಸಿಎಂ ಹಾಗೂ ಮಂತ್ರಿಮಂಡಲ ತೀರ್ಮಾನಿಸಲಿದೆ. ಈ ಬಗ್ಗೆ ಸರ್ಕಾರ ನಮ್ಮ ಅಭಿಪ್ರಾಯ ಕೇಳಿದರೆ ವ್ಯಕ್ತಪಡಿಸುತ್ತೇವೆ. ಜನರು ನಿಮ್ಮ ಗ್ಯಾರಂಟಿಗಳು ನಮಗೆ ಬೇಡ ಅಭಿವೃದ್ಧಿ ಬೇಕು ಎಂದಿದ್ದಾರೆ ಎಂದು ಬಾಲಕೃಷ್ಣ ಅಭಿಪ್ರಾಯಪಟ್ಟರು.

ಎಚ್‌ಡಿಕೆಯಿಂದ ಪಾಠ ಕಲಿತ್ತಿದ್ದೇವೆ : ಎಚ್.ಡಿ.ಕುಮಾರಸ್ವಾಮಿ ಹೇಳಿದಂತೆ ನಾವು ಪಾಠಕಲಿತಿದ್ದೇವೆ. ಅವರ ಮಾತು ನಿಜ, ಮುಂದಿನ ಚುನಾವಣೆಯಲ್ಲಿ ಪ್ರತಿಯೊಬ್ಬ ನಾಯಕರು ಒಂದೊಂದು ಪಾಠ ಕಲಿಯಬೇಕು. ಆ ರೀತಿ ಈಗ ಕಲಿತಿದ್ದೇವೆ. ಅವರು ಮಾಡಿರುವ ತಂತ್ರಗಾರಿಕೆ ಸರಿಯಿದೆ ಎಂದು ಒಪ್ಪಿಕೊಂಡಿದ್ದೇವೆ. ವಿಧಾನಸಭಾ ಚುನಾವಣೆ ವೇಳೆ ತಂತ್ರಗಾರಿಕೆ ಬಳಸಿ ನಾವು ಗೆದ್ದಿದ್ದೆವು, ಈಗ ಅವರು ತಂತ್ರಗಾರಿಕೆ ಮಾಡಿ ಗೆದ್ದಿದ್ದಾರೆ ಎಂದು ಬಾಲಕೃಷ್ಣ ಛೇಡಿಸಿದರು.

ಡಾಕ್ಟರ್ ಮಂತ್ರಿಯಾಗಲಿ :ಕೇಂದ್ರದಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಮಂತ್ರಿಯಾಗುವ ಅವಕಾಶ ಸಿಗಲಿ ಎಂದು ಹಾರೈಸಿ, ಡಿ.ಕೆ.ಸುರೇಶ್ ಅವರ ಕೆಲಸ ಮುಂದುವರಿಸಿ ಜಿಲ್ಲೆಯನ್ನು ಅಭಿವೃದ್ಧಿಗೊಳಿಸಲಿ. ನಮಗೆ ಹೆಚ್ಚು ಸಹಕಾರ ನೀಡಿ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net