

ಬೆಂಗಳೂರು ಮುಂದಿನ 10 ವರ್ಷಗಳು ಸಾಕಷ್ಟು ಕ್ಲಿಪ್ರ ತಾಂತ್ರಿಕ ಬದಲಾವಣೆಯಾಗುವ ಕಾಲಘಟ್ಟವಾಗಿದೆ. ಕಾನೂನು ಶಿಕ್ಷಕರು ಇತ್ತೀಚಿನ ಅಭಿವೃದ್ಧಿ ಮತ್ತು ಪ್ರಸ್ತುತ ಸನ್ನಿವೇಶಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್‌ಕುಮಾರ್ ತಿಳಿಸಿದರು.
ಮನುಪತ್ರ ಸಹಯೋಗದದಲ್ಲಿ ಆರ್‌ವಿ ವಿಶ್ವವಿದ್ಯಾಲಯವು ಇತ್ತೀಚೆಗೆ ಆಯೋಜಿಸಿದ್ದ ‘ದಕ್ಷಿಣ ರಾಜ್ಯಗಳ ಕಾನೂನು ಶಿಕ್ಷಕರ ಸಮಾವೇಶ 2023-24- ಭವಿಷ್ಯದ ಕಾನೂನು ಶಿಕ್ಷಕರ ಸಬಲೀಕರಣ’ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೈಬರ್ ಕಾನೂನು ಮತ್ತು ಇದಕ್ಕೆ ಸಂಬಂಧಿಸಿದ ಕಾನೂನುಗಳ ಪರಿಣಾಮ ಕುರಿತು ಕಾನೂನು ಶಿಕ್ಷಕರಿಗೆ ತರಬೇತಿ ನೀಡುವ ಅವಶ್ಯಕತೆ ಇದೆ ಎಂದರು.
ಹಿರಿಯ ವಕೀಲರ ಅಡಿಯಲ್ಲಿ ಪ್ರಾಕ್ಟೀಸ್ ಮಾಡುವುದು ಕಾನೂನು ವೃತ್ತಿಪರರ ಕಲಿಕೆ ಮತ್ತು ಬೆಳವಣಿಗೆಗೆ ಏಕೈಕೆ ಮಾರ್ಗವಲ್ಲ. ಮಾಹಿತಿ ಮತ್ತು ದತ್ತಾಂಶವನ್ನು ಪಡೆಯುವಲ್ಲಿ ಮುಂದಿನ ದಶಕದ ವ್ಯವಸ್ಥೆಗೆ ಕಾನೂನು ವೃತ್ತಿಪರರು ಸಿದ್ಧರಾಗಬೇಕಿದೆ ಎಂದ ಅವರು, ಕಳೆದ 5 ವರ್ಷದ ಸಂಯೋಜಿತ ಕಾನೂನು ಕಾರ್ಯಕ್ರಮಗಳನ್ನು ಇದೇ ವೇಳೆ ಪ್ರಸ್ತುತಪಡಿಸಿದರು.
ಕುಲಪತಿ ಪ್ರೊ. ವೈಎಸ್‌ಆರ್ ಮೂರ್ತಿ, ಗುಣಾತ್ಮಕ ಶಿಕ್ಷಣ ನೀಡಬೇಕೆಂಬುದು ಉದ್ದೇಶದಿಂದ ಆರ್‌ವಿ ವಿಶ್ವವಿದ್ಯಾಲಯವು ಜನ್ಮತಾಳಿದೆ. ಬಿಜಿನೆಸ್, ಅರ್ಥಶಾಸ, ಮುಕ್ತ ಕಲೆ ಮತ್ತು ತಂತ್ರಜ್ಞಾನದೊಂದಿಗೆ ಈಗ ಕಾನೂನು ಕೂಡ ಸೇರ್ಪಡೆಯಾಗಿದೆ ಎಂದು ಹೇಳಿದರು.
ಕಳೆದ 6 ತಿಂಗಳ ಹಿಂದೆಯಷ್ಟೇ ಆರಂಭವಾದ ಕಾನೂನು ವಿಭಾಗವು ಜಿ20, ವೈ20 ಮತ್ತು ಸಿ20 ಕಾರ್ಯಕ್ರಮಗಳ ಜತೆಜತೆಗೆ ಶಾಂತಿ, ಸಂಘರ್ಷ ಪರಿಹಾರ ಮತ್ತು ಬಲಿಪಶುಗಳನ್ನು ಕುರಿತ 3 ಅಂತಾರಾಷ್ಟ್ರೀಯ ಸಮಾವೇಶಗಳನ್ನು ನಡೆಸಿದೆ. ಈಗ ಮನುಪತ್ರದೊಂದಿಗೆ ಸಮಾವೇಶ ಹಮ್ಮಿಕೊಂಡಿರುವುದು ಸಂತಸದ ವಿಷಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮನುಪತ್ರ ಸಿಇಒ ದೀಪಕ್ ಕಪೂರ್, ಕಾನೂನು ವಿಭಾಗದ ಡೀನ್ಸ್, ವಿಪ್ರೋ ಸಂಸ್ಥೆಯ ಜನರಲ್ ಕೌನ್ಸಿಲ್ ಸೇರಿ ದಕ್ಷಿಣ ಭಾರತ ರಾಜ್ಯಗಳ 150ಕ್ಕೂ ಹೆಚ್ಚಿನ ಕಾನೂನು ಶಿಕ್ಷಕರು ಪಾಲ್ಗೊಂಡಿದ್ದರು.