

ಬೆಂಗಳೂರು: ರಂಗಕರ್ಮಿಯಾಗಿ ನಾನು ಕಂಡಂತೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬ ಭೇದಭಾವ ಇದ್ದಂತೆ ಅನ್ನಿಸುವುದಿಲ್ಲ. ಆದರೆ ಸಾಹಿತ್ಯ ಲೋಕದಲ್ಲಿ ಉತ್ತರ ಕರ್ನಾಟಕದ ಸಾಹಿತ್ಯ ಕೃತಿಗಳಿಗೆ ಅಗತ್ಯವಾಗಿ ಪ್ರೋತ್ಸಾಹ ಬೇಕಾಗಿದೆ ಎಂದು ರಂಗಕರ್ಮಿ ನಟ, ಚಲನಚಿತ್ರ ನಿರ್ದೇಶಕ ಬಿ. ಸುರೇಶ್ ಹೇಳಿದ್ದಾರೆ.
ವೀರಲೋಕ ಪ್ರಕಾಶನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 'ಉತ್ತರಪರ್ವ' ವಿವಿಧ ಲೇಖಕರ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕದ ಏಕೀಕರಣದ ಬೀಜ ಬಿತ್ತಿದವರೇ ಉತ್ತರ ಕರ್ನಾಟಕದ ಮಂದಿ. ಅದಕ್ಕೆ ಕಾರಣರಾದ ಅನೇಕ ಮಹನೀಯರನ್ನು ನೆನೆಯುತ್ತ ಹೋಗಬಹುದು. ಆ ಕಾರಣಕ್ಕಾಗಿಯೇ ನಾವು ಅವರನ್ನು ಒಳಗೊಳ್ಳುವುದಲ್ಲ, ಅವರು ನಮ್ಮನ್ನು ಒಳಗೊಳ್ಳಬೇಕು ಎಂದರು.
ಕಥೆಗಾರ ಕರ್ಕಿ ಕೃಷ್ಣಮೂರ್ತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪುಸ್ತಕದಲ್ಲಿ 'ವಿಷ ಬೆರೆಸುವ' ಸಂಸತಿ ಹೆಚ್ಚಾಗುತ್ತಿದೆ. ಅಂತಹ ವಿಷವಿರದ ಪುಸ್ತಕಗಳ ಪ್ರಕಟಣೆ ಸಂಖ್ಯೆ ಹೆಚ್ಚಬೇಕು ಎಂದು ಆಶಿಸಿದರು.
ವೀರಲೋಕ ಪ್ರತಿಷ್ಠಾನದ ಪ್ರಕಾಶಕ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ಬರಹಗಾರರು ತಮ್ಮ ಕೃತಿಯನ್ನು ಜನರಿಗೆ ವಿವರಿಸಲು ಮುಜುಗರ ಪಡಬಾರದು. ಇದು ನನ್ನ ಕೃತಿ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಮನೋಭಾವ ಹೆಚ್ಚಿಸಿಕೊಳ್ಳಬೇಕು. ಎಷ್ಟು ಕೃತಿಗಳನ್ನು ಬರೆದೆ ಎಂಬುದಕ್ಕಿಂತ, ಒಂದು ಕೃತಿಯಿಂದ ಮತ್ತೊಂದು ಕೃತಿಗೆ ಎಷ್ಟು ಜನ ಓದುಗರನ್ನು ಹೆಚ್ಚಿಸಿಕೊಂಡೆ ಎಂಬುದು ಉದ್ದೇಶವಾಗಬೇಕು. ಇದಕ್ಕಾಗಿ ಹೆಚ್ಚು ಹೆಚ್ಚು ಓದುಗರೊಂದಿಗೆ ಸಂವಹನದಲ್ಲಿ ತೊಡಗುವುದು ಸೂಕ್ತ ಎಂದು ತಿಳಿಸಿದರು.
ಕತೆಗಾರ ವೈ.ಎನ್. ಮಧು, 'ಉತ್ತರಪರ್ವ' ಸಂಪಾದಕ ರಾಗಂ, ಹಿರಿಯ ಸಾಹಿತಿ ಬೋಳುವಾರು ಮಹಮ್ಮದ್ ಕುಂಇ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಟಿ.ಎನ್. ಸೀತಾರಾಮ್, ಸಾಹಿತಿಗಳಾದ ಗಜಾನನ ಶರ್ಮ ಸಂಪ, ಕಥೆಗಾರ ವಸುಧೇಂದ್ರ ಇತರರಿದ್ದರು.
ಸಮಾರಂಭದಲ್ಲಿ 'ಆ ವದನ' (ಶೇಕ್ಷಾವಲಿ ಮಣೆಗಾರ್), ಪರಸ್ಪರ ಮತ್ತಿತರ ಕತೆಗಳು (ಮುರ್ತುಜಾಬೇಗಂ ಕೊಡಗಲಿ), ಇರುಳ ಬಾಗಿಲಿಗೆ ಕಣ್ಣದಿಪ (ಡಾ. ಸದಾಶಿವ ದೊಡ್ಡಮನಿ), ವರದಾ ತೀರದ ಕಥೆಗಳು (ರವೀಂದ್ರ ಮುದ್ದಿ), ಖದೀಜಾ (ಸಿ.ವಿ ವಿರುಪಾ), ಚಂದ್ರಾ ಲೇಔಟ್ (ಶ್ರೀಧರ ಗಸ್ತಿ), ಜನನಾಯಕ (ಪ್ರಕಾಶ ಗಿರಿಮಲ್ಲನವರ), ಓಡಿ ಹೋದಾಕಿ (ಪಾರ್ವತಿ ಸೋನಾರೆ), ಇತ್ತ ಹಾಯಲಿ ಚಿತ್ತ (ಕವಿತಾ ಹೆಗಡೆ ಅಭಯಂ), ಮಾಯಾಗುಹೆ (ನವ್ಯ ಆರ್. ಕತ್ತಿ) ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.