ಗುರು ಪೌರ್ಣಿಮೆಯಂದು ಕುರುಕ್ಷೇತ್ರದಲ್ಲಿ ಶ್ರೀಸಿದ್ಧಾಂತ ಶಿಖಾಮಣಿ ಪಂಜಾಬಿ ಕೃತಿ ಲೋಕಾರ್ಪಣೆ

sidda
Published on

ನವದೆಹಲಿ : ಸಮಸ್ತ ಮನುಕುಲಕ್ಕೆ ನೀತಿಧರ್ಮದ ತತ್ವಜ್ಞಾನಾಮೃತವನ್ನು ಬೋಧಿಸುವ ವೀರಶೈವ ವಾಙ್ಮಯ ವಿಹಾರದ ಶ್ರೇಷ್ಠ ದಾರ್ಶನಿಕ ಗ್ರಂಥ ‘ಶ್ರೀಸಿದ್ಧಾಂತ ಶಿಖಾಮಣಿ’ಯ ಪಂಜಾಬಿ ಭಾಷೆಯ ಅನುವಾದಕೃತಿ ಗುರುಪೂರ್ಣಿಮೆಯ ಪರ್ವಕಾಲದಲ್ಲಿ ಭಗವದ್ಗೀತೆಯ ಜನ್ಮಕ್ಷೇತ್ರವಾದ ಹರಿಯಾಣಾದ ಕುರುಕ್ಷೇತ್ರ ನಗರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಉತ್ತರಪ್ರದೇಶದ ಕಾಶಿ ಜ್ಞಾನ ಪೀಠದ ಪ್ರಕಾಶನದಲ್ಲಿ ಪ್ರಕಟವಾಗಿರುವ ಈ ಕೃತಿಯನ್ನು ಪಂಜಾಬಿ ಲೇಖಕಿ, ಸಂಶೋಧಕಿ ಮತ್ತು ಹರಿಯಾಣಾದ ಹಿಸಾರದಲ್ಲಿರುವ ಓಂ ಸ್ಟೆರಲಿಂಗ್ ಗ್ಲೋಬಲ್ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕಿ ಡಾ. ಶಾಲೂ ರಾಮನಿವಾಸ್ ಅವರು ‘ಶ್ರೀಸಿದ್ಧಾಂತ ಶಿಖಾಮಣಿ’ಯನ್ನು ಪಂಜಾಬಿ ಭಾಷೆಗೆ ಅನುವಾದಿಸಿದ್ದಾರೆ. ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಹರಿಯಾಣಾ ಸರಕಾರದ ಪಂಚಾಯತ್‌ರಾಜ್ಯ ವಿಕಾಸ ಮತ್ತು ಭೂವಿಜ್ಞಾನ ಸಚಿವ ಕೃಷ್ಣಲಾಲ್ ಪವಾರ ಜುಲೈ-10 ರಂದು ಕುರುಕ್ಷೇತ್ರ ನಗರದ ಪಂಜಾಬಿ ಧರ್ಮಶಾಲಾ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸುವರು. ಮನುಕುಲದ ಸರ್ವಾಭ್ಯುದಯ ಸಂಕಲ್ಪದೊಂದಿಗೆ ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹರ್ಷಿಗೆ ಬೋಧಿಸಿದ ‘ಶಿವಾದ್ವೈತ ಸಿದ್ಧಾಂತ’ದ ಮೂಲ ಸಂಸ್ಕೃತ ಭಾಷೆಯ ಕೃತಿ ಸುಮಾರು 1400 ಕ್ಕೂ ಅಧಿಕ ಶ್ಲೋಕಗಳನ್ನು ಒಳಗೊಂಡಿದೆ.

20ನೇ ಅನುವಾದ ಕೃತಿ

ಜಾಗತಿಕ ಮೇರು ದಾರ್ಶನಿಕ ಕೃತಿಯಾಗಿರುವ ‘ಶ್ರೀಸಿದ್ಧಾಂತ ಶಿಖಾಮಣಿ’ಯು ಈಗಾಗಲೇ ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ತೆಲಗು, ತಮಿಳು, ಗುಜರಾತಿ, ಉಡಿಯಾ, ಜರ್ಮನಿ, ರಶಿಯನ್, ನೇಪಾಳಿ, ಜಪಾನಿ ಸೇರಿದಂತೆ ಒಟ್ಟು 19 ಭಾಷೆಗಳಿಗೆ ತರ್ಜುಮೆಗೊಂಡಿದೆ. 2020ರಲ್ಲಿ ಕಾಶಿ ಪೀಠ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಎಲ್ಲಾ 19 ಕೃತಿಗಳನ್ನು ಬಿಡುಗಡೆ ಮಾಡಿದ್ದು, ಪ್ರಸ್ತುತ ಪಂಜಾಬಿ ಕೃತಿ 20ನೆಯ ಕೃತಿಯಾಗಿ ಓದುಗರ ಕೈಸೇರಲಿದೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಹಲವಾರು ಲೇಖಕರು, ಸಂಶೋಧಕರು, ಅನುಭಾವಿಗಳು ಹಾಗೂ ಕಾಶಿ ಪೀಠದ ಭಕ್ತರು ಕುರುಕ್ಷೇತ್ರದ ಈ ಸಮಾರಂಭದಲ್ಲಿ ಪಾಲ್ಗೊಳ್ಳುವರೆಂದು ಕಾಶಿ ಪೀಠದ ಶ್ರೀಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ಮಾಧ್ಯಮ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net