

ಶಿಗ್ಗಾಂವಿ: 2020-21ನೇ ಸಾಲಿನ ಎಲ್ಲ ನೆರೆ ಸಂತ್ರಸ್ತರಿಗೆ ಅನುಮತಿ ಪತ್ರ ಹಾಗೂ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಶಿಗ್ಗಾಂವಿ ಶಿರಸ್ತೇದಾರ್ ಬಸವರಾಜ ಹೊಂಕಣದ ಅವರಿಗೆ ಬಂಕಾಪುರ ನಿವಾಸಿಗಳು ಗುರುವಾರ ಮನವಿ ಸಲ್ಲಿಸಿದರು.
ಬಂಕಾಪುರ ಪಟ್ಟಣದಲ್ಲಿ ಈ ಬಾರಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಬಂಕಾಪುರ ಪುರಸಭೆ ಇದುವರೆಗೆ ಅನುಮತಿ ಪತ್ರ ಹಾಗೂ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಕೆಲ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ ಇನ್ನು ಕೆಲವು ಕುಟುಂಬಗಳು ಹಾನಿಗೊಳಗಾದ ಮನೆಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಮತ್ತೆ ಮಳೆಗಾಲ ಆರಂಭಗೊಂಡಿರುವುದರಿಂದ ಅಪಾಯದಲ್ಲಿ ಜೀವನ ಸಾಗಿಸುವಂತಾಗಿದೆ. ಆದ್ದರಿಂದ ಕೂಡಲೆ ನೆರೆ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ವಿುಸಿಕೊಳ್ಳಲು ಅನುಮತಿ ಪತ್ರ ಹಾಗೂ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಮಲ್ಲೇಶಪ್ಪ ಬಂಗಿ, ಅಶೋಕ ಕೋಣನತಂಬಗಿ, ಬಸವರಾಜ ಮುಗದೂರ, ಸಂತೋಷ ಸಂಶಿ, ಚನ್ನಪ್ಪ ಮುಗದೂರ, ದೇವರಾಜ ರಾಮಣ್ಣವರ, ಕಲ್ಲಪ್ಪ ತೊಂಡೂರ, ಸುನೀಲ ಹಾದಿ, ನಾಗರಾಜ ಗಣಪ್ಪನವರ, ಕರಬಸಪ್ಪ ದೇವಗೇರಿ ಮತ್ತಿತರರು ಉಪಸ್ಥಿತರಿದ್ದರು.