ಅಧಿಕ ಕಾರ್ಯದೊತ್ತಡದಿಂದ ಮುಕ್ತಿ ಕೊಡಿ

FotoJet (1)
Published on

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಒತ್ತಾಯ

ಚನ್ನಪಟ್ಟಣ : ಅಧಿಕ ಕಾರ್ಯದೊತ್ತಡದಿಂದ ನಮಗೆ ಮುಕ್ತಿ ಕೊಡಿ ಎಂದು ಸರ್ಕಾರ ಹಾಗೂ ಇಲಾಖೆಯ ಗಮನಸೆಳೆಯುವ ಉದ್ದೇಶದಿಂದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶನಿವಾರ ನಗರದಲ್ಲಿ ಶಾಂತಿಯುತ ಜಾಥಾ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಗಾಂಧಿ ಭವನದಿಂದ ಜಾಥ ಮೂಲಕ ತಾಲೂಕು ಕಚೇರಿಗೆ ಆಗಮಿಸಿದ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ತಮ್ಮ ಅಹವಾಲು ಸಲ್ಲಿಸಿದರು. ಇವರಿಗೆ, ತಾಲೂಕು ಸರ್ಕಾರಿ ನೌಕರರ ಸಂಘ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಪಿಡಿಒ ಕ್ಷೇಮಾಭಿವೃದ್ಧಿ ಸಂಘ ಹಾಗೂ ಎಸ್ಡಿಎಂಸಿ ಸಮನ್ವಯ ವೇದಿಕೆ ಸೇರಿ ಹಲವು ಸಂಘ-ಸಂಸ್ಥೆಗಳು ಸಾಥ್ ನೀಡಿದವು.

ಸರ್ಕಾರ ಕಣ್ಣು ತೆರೆಯಲಿ!

ರಾಜ್ಯ ಎಸ್‌ಡಿಎಂಸಿ ಉಪಾಧ್ಯಕ್ಷ ನಾಗವಾರ ಶಂಭೂಗೌಡ ಮಾತನಾಡಿ, ಇಲಾಖೆ ಶಿಕ್ಷಕರಿಗೆ ಪಾಠ ಮಾಡುವುದರ ಜತೆಗೆ ಹತ್ತಾರು ಕೆಲಸಗಳನ್ನು ನೀಡುತ್ತಿದೆ. ಇದು ಶಿಕ್ಷಕರಲ್ಲಿ ಒತ್ತಡ ಉಂಟು ಮಾಡುತ್ತಿದ್ದು, ಈ ಒತ್ತಡ ತಾಳಲಾರದೆ ಹಲವರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇದಕ್ಕೆ ಇತ್ತೀಚಿಗೆ ತಾಲೂಕಿನ ಮುಖ್ಯಶಿಕ್ಷಕ ಸುಖೇಂದ್ರ ಸಾವು ಉದಾಹರಣೆಯಾಗಿದೆ. ಸರ್ಕಾರ ಇನ್ನಾದರೂ ಶಿಕ್ಷಕರ ಸಮಸ್ಯೆ ಬಗ್ಗೆ ಕಣ್ಣು ತೆರೆಯಬೇಕು. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಪ್ರಾಣ ಉಳಿಸಬೇಕು ಎಂದು ಒತ್ತಾಯಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಮಾತನಾಡಿ , ರಾಜ್ಯದಲ್ಲಿ ಶಿಕ್ಷಕರ ಕೊರತೆಯಿದೆ. ಇದಕ್ಕೆ ನಮ್ಮ ಜಿಲ್ಲೆಯೂ ಹೊರತಲ್ಲ. ಒಂದೆಡೆ, ಶಿಕ್ಷಕರ ಕೊರತೆ ಹಾಗೂ ಅಧಿಕ ಕಾರ್ಯಭಾರದಿಂದ ಶಿಕ್ಷಕರು ನಲುಗಿ ಹೋಗುತ್ತಿದ್ದಾರೆ. ಈ ಹಿಂದೆ ನಮ್ಮ ಶಿಕ್ಷಕರು ಕೇವಲ ಮಕ್ಕಳಿಗೆ ಪಾಠ ಮಾಡುವುದಕ್ಕೆ ಸಿಮೀತವಾಗಿದ್ದರು. ಇದೀಗ, ಪಾಠ ಬಿಟ್ಟು ಬೇರೆಲ್ಲ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ. ಇದರ ಬಗ್ಗೆ ಸರ್ಕಾರ ಗಂಭೀರವಾದ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುದೀಂದ್ರ ಮಾತನಾಡಿ, ಪ್ರತಿ ನಿತ್ಯ ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡುವುದು, ಒತ್ತಡ ಹಾಕುವುದು ಹಾಗೂ ಮಾನಸಿಕ ಹಿಂಸೆ ನೀಡುವುದು ನಿರಂತರವಾಗಿ ನಡೆಯುತ್ತಿದೆ. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಮೇಲಂತೂ ಸಾಕಷ್ಟು ದಬ್ಬಾಳಿಕೆ ನಡೆಯುತ್ತಿದೆ. ವ್ಯವಸ್ಥೆ ಈ ರೀತಿಯಾದರೆ, ಗತಿಯೇನು ಎಂದು ಆತಂಕ ವ್ಯಕ್ತಪಡಿಸಿದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು ಮಾತನಾಡಿ, ಶಿಕ್ಷಕರಿಗೆ ತಾಂತ್ರಿಕ ಕೆಲಸದ ಒತ್ತಡ ವಿಪರೀತವಾಗಿದೆ. ಎಲ್ಲ ಕಾರ್ಯಕ್ರಮಗಳನ್ನು ಆನ್‌ಲೈನ್ ಮೂಲಕ ನೀಡಬೇಕಾದ ಒತ್ತಡ ಸಾಕಷ್ಟು ಸಮಸ್ಯೆಗೆ ಕಾರಣವಾಗುತ್ತಿದೆ. ಇಲಾಖೆ ಇದಕ್ಕೆ ಪರ್ಯಾಯ ವ್ಯವಸ್ಥೆ ರೂಪಿಸಿ, ಶಿಕ್ಷಕರು ಒತ್ತಡ ರಹಿತವಾದ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net