

ಹಾಸನ: ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರದಿಂದ ಆಯ್ಕೆಯಾಗಿರುವ ಬುಕರ್ ಪ್ರಶಸ್ತಿ ವಿಜೇತೆ ಸಾಹಿತಿ
ಬಾನು ಮುಷ್ತಾಕ್ ಅವರು, ಸರ್ಕಾರದ ಆಹ್ವಾನ ತಿರಸ್ಕರಿಸಬೇಕು ಎಂದು ರಾಷ್ಟ್ರ ರಕ್ಷಣಾ ಸೇನೆ ಬುಧವಾರ ಮನವಿ ಸಲ್ಲಿಸಿತು.
ಬಾನು ಮುಷ್ತಾಕ್ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದ ಸೇನೆಯ ರಾಜ್ಯ ಸಂಚಾಲಕ ಸುರೇಶ್‌ಗೌಡ, ಜಿಲ್ಲಾ
ಸಂಚಾಲಕ ಧರ್ಮನಾಯಕ್, ರಾಜೇಶ್ ಕೆಂಚನಹಳ್ಳಿ ಇತರರು ನಿಮ್ಮ ಆಯ್ಕೆಗೆ ವಿವಿಧ ಕ್ಷೇತ್ರಗಳಿಂದ ತೀವ್ರ ವಿರೋಧ
ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ನೀಡಿರುವ ಆಹ್ವಾನವನ್ನು ತಿರಸ್ಕರಿಸಿ ಎಂದು ಮನವಿ ಸಲ್ಲಿಸಿದರು.
ಈ ಹಿಂದೆ ಭುವನೇಶ್ವರಿ ತಾಯಿ ಬಗ್ಗೆ ವಿರೋಧ ಮಾಡಿ ಮಾತನಾಡಿದ್ದೀರಿ, ದಸರಾ ನಾಡಹಬ್ಬವಾದರೂ ಅದು ನಮ್ಮ ಹಿಂದು ಸಂಪ್ರದಾಯದ ಪ್ರತೀಕವಾದ ಹಬ್ಬ. ಹಾಗಾಗಿ ಮೂರ್ತಿ ಪೂಜೆ ಇತ್ಯಾದಿ ನಮ್ಮ ಸಂಸ್ಕೃತಿ, ಸಂಪ್ರದಾಯ ಒಪ್ಪದ ನೀವು ದಸರಾ ಉದ್ಘಾಟನೆಯಿಂದ ಹಿಂದೆ ಸರಿಯಿರಿ ಎಂದು ಮನವಿ ಮಾಡಿದರು.
ನೀವು ಇದೇ ವರ್ಷಾಂತ್ಯದಲ್ಲಿ ಗಡಿನಾಡು ಬೆಳಗಾವಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ನಮ್ಮ ಅಭ್ಯಂತರ ಇಲ್ಲ. ಆದರೆ ದಸರಾ ಉದ್ಘಾಟನೆಯಿಂದ ನೀವೇ ಹಿಂದೆ ಸರಿಯಿರಿ ಎಂದು ವಿನಂತಿ ಮಾಡಿದರು.
ಮನವಿ ಸ್ವೀಕರಿಸಿದ ನಂತರ ಸ್ಪಷ್ಟ ಪ್ರತಿಕ್ರಿಯೆ ನೀಡದ ಬಾನು ಮುಷ್ತಾಕ್ ಅವರು, ಸಂಪ್ರದಾಯಕ್ಕೆ ಲೋಪ ಬಾರದಂತೆ
ದಸರಾ ಹಬ್ಬವನ್ನು ಉದ್ಘಾಟನೆ ಮಾಡುವುದಾಗಿ ಹೇಳಿದರು.