

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ, ಕೆಆರ್ಎಸ್ ಸಂಘಟನೆಗಳ ನೇತೃತ್ವದಲ್ಲಿ ಧರ್ಮಸ್ಥಳದ ಸೌಜನ್ಯ ಗೌಡ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮರು ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಗಿಬ್ ಸರ್ಕಲ್ನಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸೌಜನ್ಯ ಗೌಡಳ ಭಾವಚಿತ್ರ ಹಿಡಿದು ನ್ಯಾಯಕ್ಕಾಗಿ ಘೊಷಣೆ ಕೂಗಿದರು.
ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ನಾಯ್ಕ ಮಾಸ್ತಿಹಳ್ಳ ಮಾತನಾಡಿ, ಸೌಜನ್ಯ ಕೊಲೆಯಾಗಿ 11 ವರ್ಷವಾದರೂ ಅಪರಾಧಿ ಸಿಕ್ಕಿಲ್ಲ. ಇಂತಹ ಹಲವಾರು ಹೆಣ್ಣು ಮಕ್ಕಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ನಮ್ಮ ರಾಜ್ಯದ ಸುತ್ತ ನಡೆದು ಇತ್ಯರ್ಥವಾಗದೇ ಮುಚ್ಚಿ ಹೋದದ್ದಿದೆ. ಹಾಗಾಗಿ ಈ ಪ್ರಕರಣವೂ ಹಾಗಾಗದೇ, ಅಪರಾಧವನ್ನು ಯಾರೇ ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲೇಬೇಕು. ಅದಕ್ಕಾಗಿ ಮರು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ವಕೀಲ ನಾಗರಾಜ ಹೆಗಡೆ ಮಾತನಾಡಿ, ಸೌಜನ್ಯಾಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದವರು ಅದೆಷ್ಟೇ ಪ್ರಭಾವಶಾಲಿಯಾಗಿದ್ದರೂ, ಮುಲಾಜಿಲ್ಲದೆ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಗುಣವಂತೆಯ ಶಂಕರ ಗೌಡ ಮಾತನಾಡಿದರು. ಕರುನಾಡ ವಿಜಯಸೇನೆ, ದರ್ಶನ್ ಅಭಿಮಾನಿ ಬಳಗ ಇತರ ಸಮಾನ ಮನಸ್ಕರು ಇದ್ದರು.