ಸೈನ್ಸ್​ ಸಿಟಿ ನಿರ್ಮಿಸಲು ಸಿದ್ಧತೆ

Science_City
Published on

ತುಮಕೂರು: ತುಮಕೂರು ವಿವಿ "ಜ್ಞಾನಸಿರಿ' ಆವರಣದಲ್ಲಿ 4ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಉಪಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನಾಗಿ ಉನ್ನತಿಕರಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್​.ಎಸ್​.ಬೋಸರಾಜು ಭರವಸೆ ನೀಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಅನುದಾನದಿಂದ ತುಮಕೂರು ವಿವಿ ಬಿದರಕಟ್ಟೆ "ಜ್ಞಾನಸಿರಿ'ಯಲ್ಲಿ ನಿರ್ಮಿಸಲಾಗಿರುವ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ದು - ಜನರನ್ನು ವಿಜ್ಞಾನದ ಕಡೆಗೆ ಕರೆದೊಯ್ಯುವುದು ಸರ್ವರಿಗೂ ವಿಜ್ಞಾನ, ಸುಲಭ ವಿಜ್ಞಾನ, ಸುಸ್ಥಿರ ಅಭಿವೃದ್ದಿಗಾಗಿ ವಿಜ್ಞಾನ ಎನ್ನುವ ಧ್ಯೇಯವಾಕ್ಯದ ಅಡಿಯಲ್ಲಿ ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮ ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದರು.

ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಆರ್ಥಿಕ ಬೆಳವಣಿಗೆಯ ಪ್ರಮುಖ ಚಕ್ರಗಳಾಗಿವೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿಜ್ಞಾನ ಕೇಂದ್ರಗಳು ಹಾಗೂ ತಾರಾಲಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ, ದಕ್ಷಿಣ ಭಾರತದಲ್ಲೇ ಮೊದಲ ಸೈನ್ಸ್​ ಸಿಟಿ ನಿರ್ಮಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಯುವ ಮನಸ್ಸುಗಳಲ್ಲಿ ಕುತೂಹಲ, ಸೃಜನಶೀಲತೆ ಮತ್ತು ಕಲ್ಪನೆಯನ್ನು ಬೆಳೆಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸಲು ಕ್ರಮವಹಿಸುತ್ತಿದ್ದು, ಪ್ರಸ್ತುತ 2 ಪ್ರಾದೇಶಿಕ ಹಾಗೂ 9 ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ ವಿಜ್ಞಾನ ಕೇಂದ್ರಗಳು ಸ್ಥಾಪನಾ ಕಾರ್ಯ ವಿವಿಧ ಹಂತದ ಪ್ರಗತಿಯಲ್ಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಹಾಗೂ ತಾರಾಲಯಗಳನ್ನು ನಿರ್ಮಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಬೋಸರಾಜ್​ ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಶಾಸಕ ಬಿ.ಸುರೇಶ್​ಗೌಡ, ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು, ಕುಲಸಚಿವೆ ನಾಹಿದಾ ಜಮ್​ ಜಮ್​, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್​, ಗಳಿಗೇನಹಳ್ಳಿ ಗ್ರಾಪಂ ಅಧ್ಯಕ್ಷ ಜಿ.ದೇವರಾಜು, ನಾಗವಲ್ಲಿ ಗ್ರಾಪಂ ಅಧ್ಯಕ್ಷೆ ಎಸ್​.ಮಂಗಳಗೌರಮ್ಮ ಇದ್ದರು.

ಸೈನ್ಸ್​ಸಿಟಿ ನಿರ್ಮಿಸಲು ಬದ್ಧ

ರಾಜ್ಯದಲ್ಲಿ ಸೈನ್ಸ್​ ಸಿಟಿ ನಿರ್ಮಿಸಲು ಅನಮತಿ ನೀಡಲಾಗಿದೆ, ಕನಿಷ್ಟ 30 ಲಕ್ಷ ಜನಸಂಖ್ಯೆ ಹೊಂದಿರುವ ನಗರವೇ ಆಗಬೇಕು ಎಂಬ ಮಾರ್ಗಸೂಚಿ ಹಿನ್ನೆಲೆಯಲ್ಲಿ ತುಮಕೂರು ಬದಲಾಗಿ, ಬೆಂಗಳೂರಿನಲ್ಲಿ ಕೇಂದ್ರ ಆರಂಭಿಸಲಾಗಿದೆ. ಹಾಗಾಗಿ, ಉಪಕೇಂದ್ರಗಳನ್ನು ರಾಮನಗರ, ಕೋಲಾರ, ಚಿತ್ರದುರ್ಗ, ವಿಜಯನಗರ ಬಿಟ್ಟು ಉಳಿದೆಲ್ಲಾ ಜಿಲ್ಲೆಯಲ್ಲಿಯೂ ಸ್ಥಾಪಿಸಲಾಗಿದೆ ಎಂದು ಸಚಿವ ಬೋಸರಾಜ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net