ನಾಳೆಯಿಂದ 7 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​​: ರಾಜ್ಯದಲ್ಲೆಡೆ ಮಂಗಳವಾರವೂ ಮುಂದುವರಿದ ವರುಣಾರ್ಭಟ

Rainy weather
Rainy weather
Published on

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರವೂ ವರುಣಾರ್ಭಟ ಮುಂದುವರಿದಿದೆ.

ಉಡುಪಿಯ ಕಾರ್ಕಳ, ದಕ್ಷಿಣ ಕನ್ನಡದ ಪಣಂಬೂರು ವೀಕ್ಷಣಾಲಯ, ಉತ್ತರ ಕನ್ನಡದ ಯಲ್ಲಾಪುರ, ಮಂಗಳೂರು ವಿಮಾನ ನಿಲ್ದಾಣ, ಚಿಕ್ಕಮಗಳೂರಿನ ಕಳಸ, ಕೊಡಗಿನ ಭಾಗಮಂಡಲ, ಬೆಂಗಳೂರು ನಗರ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭರ್ಜರಿ ಪೂರ್ವ ಮುಂಗಾರು ಮಳೆ ಸುರಿದಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮುಂದಿನ 2 ದಿನ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್​ ಅಲರ್ಟ್​​​​ ಕೊಟ್ಟಿದೆ. ಈ ವೇಳೆ 150ಕ್ಕೂ ಅಧಿಕ ಮಿಮೀ ಮಳೆಯಾಗುವ ಸಂಭವ ಇದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಮೈಸೂರಿನಲ್ಲಿ ಮೇ 21 ಮತ್ತು ಮೇ 22ರಂದು ಬಿರುಸಾಗಿ ವರ್ಷಧಾರೆಯಾಗುವ ಹಿನ್ನೆಲೆಯಲ್ಲಿ ಆರೆಂಜ್​ ಅಲರ್ಟ್​​​​ ಕೊಡಲಾಗಿದೆ.

ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ರಾಮನಗರ, ತುಮಕೂರು, ಬಾಗಲಕೋಟೆ, ಕೊಪ್ಪಳದಲ್ಲಿ ಮೇ 21ರಂದು ಯೆಲ್ಲೋ ಅಲರ್ಟ್​​​​ ಇರಲಿದೆ. ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ. ರಾಜ್ಯದಲ್ಲಿ ಮುಂದಿನ 5 ದಿನ ಗರಿಷ್ಠ ತಾಪಮಾನದಲ್ಲಿ 2-3 ಡಿ.ಸೆ. ಉಷ್ಣಾಂಶ ಇಳಿಕೆಯಾಗಲಿದೆ.

ಮೇ 23ರಿಂದ 25ರವರೆಗೆ ವಿರಾಮ:

ರಾಜ್ಯದಲ್ಲೆಡೆ ಸುರಿಯುತ್ತಿರುವ ಮಳೆ, ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಮೇ 23ರಿಂದ ಮೇ 25ರವರೆಗೆ ಮಳೆ ಬಿಡುವು ಕೊಡಲಿದೆ. ಬಳಿಕ, ರಾವಳಿ, ಮಲೆನಾಡು ಸೇರಿ ಹಳೆಯ ಮೈಸೂರು ಭಾಗದಲ್ಲಿ ಮೇ 26ರಿಂದ ಮತ್ತೆ ಬಿರುಸಾಗಿ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net