

ಬೆಂಗಳೂರು: ನಗರದಲ್ಲಿ ಸುರಿದ ಭಾರೀ ಮಳೆಯಿಂದ ಹಲವೆಡೆ ಅನಾಹುತ ಸಂಭವಿಸಿದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಬ್ಬರೂ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ (ಐಸಿಸಿಸಿ) ಸಹಾಯವಾಣಿಗೆ ಸೋಮವಾರ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಇಬ್ಬರೂ ಬಳ್ಳಾರಿಯಲ್ಲಿ ನಿಗದಿಯಾಗಿರುವ ಸರ್ಕಾರದ ಸಾಧನ ಸಮಾವೇಶದ ಬಗ್ಗೆ ಅಂತಿಮ ಕ್ಷಣದ ಸಿದ್ಧತೆ ನಡೆಸಿದ್ದರು. ಆದರೆ, ಮಳೆ ಅನಾಹುತ ಹೆಚ್ಚಾದ ಕಾರಣ ಇಬ್ಬರೂ ಮಧ್ಯಾಹ್ನದ ವೇಳೆಗೆ ಕಂಟ್ರೋಲ್ ರೂಂಗೆ ಆಗಮಿಸಿ ಸಮಸ್ಯೆಯ ಮೂಲ ಅರಿತು ಕೈಗೊಳ್ಳಬೇಕಾದ ಪರಿಹಾರ ಕಾರ್ಯವನ್ನು ಚುರುಕುಗೊಳಿಸಲು ಸೂಚಿಸಿದರು.
ಕಂಟ್ರೋಲ್ ರೂಂನಲ್ಲಿ ಮಳೆ ಅನಾಹುತಕ್ಕೆ ಪರಿಹಾರ ಹಾಗೂ ಉಸ್ತುವಾರಿ ವಹಿಸುವ ಕುರಿತು ಕ್ಷಣ ಕ್ಷಣದ ಮಾಹಿತಿಯನ್ನು ಎಲ್ಲ ವಲಯಗಳ ಮುಖ್ಯಸ್ಥರಿಗೆ 24/7 ಮಾದರಿಯಲ್ಲಿ ನೀಡುವ ವ್ಯವಸ್ಥೆ ಇದೆ. ಜತೆಗೆ ಮಾಹಿತಿ ಆಧರಿಸಿ ಸಮಸ್ಯಾತ್ಮಕ ಸ್ಥಳಗಳಿಗೆ ಪರಿಹಾರ ತಂಡಗಳನ್ನು ತಕ್ಷಣ ಕಳುಹಿಸಲು ಸೂಚನೆ ನೀಡಲಾಗುತ್ತಿದೆ ಎಂದು ಪಾಲಿಕೆ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಸಿಎಂ ಗಮನಕ್ಕೆ ತಂದರು.
ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಚಿವ ಕೆ.ಜೆ.ಜಾರ್ಜ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜ್, ನಜೀರ್ ಅಹ್ಮದ್, ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್ ಹಾಗೂ ಹಿರಿಯ ಅಧಿಕಾರಿಗಳಿದ್ದರು.
ಮೃತ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ:
ಮಹದೇವಪುರ ಕ್ಷೇತ್ರದ ಸೀತಾರಾಮಪಾಳ್ಯ ಬಳಿಯ ಕೆಟಿಪಿಒ ಸಮೀಪದಲ್ಲಿ ಖಾಸಗಿ ಕಂಪನಿಯ ಕಾಂಪೌಂಡ್ ಗೋಡೆ ಕುಸಿದ ಮೃತಪಟ್ಟಿರುವ ಶಶಿಕಲಾ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ಲಕ್ಷ ರೂ. ಪರಿಹಾರ ಪ್ರಕಟಿಸಿದರು. ಭಾರೀ ಮಳೆಯಿಂದ ಗೋಡೆ ಶಿಥಿಲಗೊಂಡು ಸೋಮವಾರ ಬೆಳಗ್ಗೆ ಆ ಸ್ಥಳದಲ್ಲಿ ಕಸ ಗುಡಿಸುವ ವೇಳೆ ಕಾಂಪೌಂಡ್ ಉರುಳಿ ಬಿದಿದ್ದು ವಿಷಾದನೀಯ. ಮಾನವೀಯ ದೃಷ್ಟಿಯಿಂದ ಆಕೆಯ ಕುಟುಂಬಕ್ಕೆ ಪರಿಹಾರ ಹಸ್ತಾಂತರಿಸಲಾಗುವುದು ಎಂದು ಸಿಎಂ ತಿಳಿಸಿದರು.
ಜಲಾವೃತ ಪ್ರದೇಶದತ್ತ ಅಧಿಕಾರಿಗಳ ದೌಡು:
ಭಾರೀ ಮಳೆಯಿಂದ ಅನಾಹುತ ಸಂಭವಿಸಿದ ಸ್ಥಳಗಳಿಗೆ ಪಾಲಿಕೆಯ ಹಿರಿಯ ಅಧಿಕಾರಿಗಳು ಸೋಮವಾರ ಬೆಳಗ್ಗೆಯೇ ದೌಡಾಯಿಸಿ ಪರಿಹಾರ ಕಾರ್ಯದ ಉಸ್ತುವಾರಿ ವಹಿಸಲಾರಂಭಿಸಿದರು. ತುಷಾರ್ ಗಿರಿನಾಥ್ ಅವರು ಜಲಾವೃತವಾಗಿರುವ ಸಾಯಿ ಲೇಔಟ್‌ಗೆ ಟ್ರ್ಯಾಕ್ಟರ್ ಮೂಲಕ ತೆರಳಿ ಸಮಸ್ಯೆ ಆಲಿಸಿದರು. ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಬೆಳ್ಳಂದೂರು ಕೆರೆಯ ಇನ್‌ಲೆಟ್ ಜಂಕ್ಷನ್ ಬಳಿ ಸ್ಥಳಪರಿಶೀಲನೆ ನಡೆಸಿದರು. ಆಯಾ ವಲಯ ಮುಖ್ಯ ಆಯುಕ್ತರು, ಇಂಜಿನಿಯರ್‌ಗಳು ಕೂಡ ಸಮಸ್ಯೆ ಆಲಿಸಿದರು. ಈ ವೇಳೆ ಸಾರ್ವಜನಿಕರು ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈವರೆಗೂ ಬಾರದ ನೀವು, ಈಗ ಬಂದು ಮಾಡುವುದು ಏನಿದೆ? ಈ ಹಿಂದೆಯೇ ದೂರು ನೀಡಿದ್ದರೂ, ಏಕೆ ಸ್ಪಂದಿಸಲಿಲ್ಲ ಎಂದು ನಾಗರಿಕರು ಅಧಿಕಾರಿಗಳನ್ನು ಪ್ರಶ್ನಿಸಿದರು. ಸಾಯಿ ಲೇಔಟ್, ಎಚ್‌ಬಿಆರ್ ಬಡಾವಣೆಯಲ್ಲಿ ಇಂಜಿನಿಯರ್‌ಗಳನ್ನು ಜನರು ನಿಂದಿಸಿದ ಪ್ರಕರಣವೂ ನಡೆಯಿತು.
ಮಾನ್ಯತಾ ಟೆಕ್ ಪಾರ್ಕ್‌ಗೆ ನೋಟಿಸ್:
ರಿಂಗ್ ರಸ್ತೆಯ ನಾಗವಾರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಮಳೆನೀರು ಸಮರ್ಪಕವಾಗಿ ಹರಿಯಲು ಅವಕಾಶ ಮಾಡಿಕೊಡದ ಅಲ್ಲಿನ ವ್ಯವಸ್ಥಾಪನಾ ಮಂಡಳಿಗೆ ನೋಟಿಸ್ ನೀಡಲು ಬಿಬಿಎಂಪಿ ಮುಂದಾಗಿದೆ. ಹಿಂದಿನ ವರ್ಷ ಕೂಡ ಮಳೆಯಿಂದ ಸಮಸ್ಯೆ ಆಗಿದ್ದರೂ, ಮುನ್ನೆಚ್ಚರಿಕೆ ಕೈಗೊಂಡಿರಲಿಲ್ಲ. ನಿಯಮ ಮೀರಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂಬ ದೂರು ಹಿನ್ನೆಲೆ ನೋಟಿಸ್ ನೀಡಲು ಡಿಸಿಎಂ ಕೂಡ ಸೂಚಿಸಿದ್ದಾರೆ.