ಕರಾವಳಿಯಲ್ಲಿ ರೆಡ್ ಅಲರ್ಟ್: ದಕ್ಷಿಣ ಕನ್ನಡ - ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

rain
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕರಾವಳಿಯಲ್ಲಿ ಸೋಮವಾರ ದಿನಪೂರ್ತಿ ಧಾಕಾರಾರ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಜು.16 ಮತ್ತು 17ರಂದು ಕರಾವಳಿಯಲ್ಲಿ ರೆಡ್ ಅಲರ್ಟ್ ಮುಂದುವರಿದಿರುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು (ಪಿ.ಯು.)ಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮಂಗಳವಾರವೂ (ಜುಲೈ-16) ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಾಟ್ ಮುಳುಗಡೆ

ಸೋಮವಾರ ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಿದೆ. ನಿರಂತರ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನಘಾಟ್ ಮುಳುಗಡೆಯಾಗಿದೆ. ನದಿ ನೀರಿನ ಮಟ್ಟ ಏರುಗತಿಯಲ್ಲಿದೆ. ಚಾರ್ಮಾಡಿ, ಆಗುಂಬೆ ಸೇರಿದಂತೆ ಘಾಟ್ ಮೂಲದಲ್ಲಿ ಉತ್ತಮ ಮಳೆಯಾಗಿರುವುದು ಮಾತ್ರವಲ್ಲದೆ ನದಿ ನೀರಿನ ಹರಿಯುವಿಕೆಯಲ್ಲೂ ಹೆಚ್ಚಳವಾಗಿದೆ.

ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ

ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರಾ ನದಿ 27.20 ಮೀಟರ್ ಹಾಗೂ ಬಂಟ್ವಾಳ 6.1 ಮೀಟರ್‌ನಲ್ಲಿ ಹರಿಯುತ್ತಿದೆ. ಕರಾವಳಿಯಲ್ಲಿ ಗಂಟೆಗೆ 35 ಕಿ.ಮೀ.ನಿಂದ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ. ಜುಲೈ 18ರಿಂದ ಮತ್ತು ಅದರ ಮುಂದಿನ 3 ಅಥವಾ 4 ದಿನಗಳ ಕಾಲ ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಒಳನಾಡು ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಜುಲೈ 20ರವರೆಗೂ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಿನಪೂರ್ತಿ ಧಾರಾಕಾರ ಮಳೆ

ದ.ಕ. ಜಿಲ್ಲೆಯಲ್ಲಿ ಸೋಮವಾರ ನಸುಕಿನಿಂದಲೇ ಮಳೆ ಕಾಣಿಸಿದೆ. ಬೆಳಗ್ಗೆಯೂ ಎಡೆಬಿಡದೆ ಮಳೆ ಸುರಿದಿದ್ದು, ವಾಹನ ಸಂಚಾರ ಹಾಗೂ ಜನಜೀವನ ತುಸು ಅಸ್ತವ್ಯಸ್ತವಾಗಿದೆ. ಮಂಗಳೂರು ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲೂ ದಿನಪೂರ್ತಿ ಧಾರಾಕಾರ ಮಳೆಯಾಗಿದೆ. ಅಪರಾಹ್ನ ಕೂಡ ಮಳೆ ಬಿರುಸು ಪಡೆದಿದ್ದು, ಇಡೀ ವಾತಾವರಣ ಚಳಿ ಹಿಡಿಸಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸ್ನಾನ ಘಾಟ್ ಮುಳುಗಡೆಯಾದ ಕಾರಣ ಯಾತ್ರಾರ್ಥಿಗಳು ತೊಂದರೆ ಪಡಬೇಕಾಯಿತು. ಕೊಂಕಣ ಮಾರ್ಗದಲ್ಲೂ ಭಾರಿ ಮಳೆಗೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.

ಮೂಡುಬಿದಿರಿಗೆ ಗರಿಷ್ಠ ಮಳೆದ.ಕ. ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗಿನವರೆಗೆ ಮೂಡುಬಿದಿರೆಯಲ್ಲಿ ಗರಿಷ್ಠ 87.3 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 68 ಮಿ.ಮೀ. ಆಗಿದೆ. ಬೆಳ್ತಂಗಡಿ 57.4 ಮಿ.ಮೀ., ಬಂಟ್ವಾಳ 68 ಮಿ.ಮೀ., ಮಂಗಳೂರು 59.8 ಮಿ.ಮೀ., ಪುತ್ತೂರು 73 ಮಿ.ಮೀ., ಸುಳ್ಯ 84.8 ಮಿ.ಮೀ., ಕಡಬ 63.3 ಮಿ.ಮೀ., ಮೂಲ್ಕಿ 67.1 ಮಿ.ಮೀ. ಹಾಗೂ ಉಳ್ಳಾಲದಲ್ಲಿ 75.6 ಮಿ.ಮೀ. ಮಳೆ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net