ಉಡುಪಿ,ಉತ್ತರ ಕನ್ನಡಕ್ಕೆ 2 ದಿನ ರೆಡ್​ ಅಲರ್ಟ್:ಕರಾವಳಿ, ಉ.ಕ. ಭಾಗದಲ್ಲಿ ಭಾರಿ ಮಳೆ

alert
Published on

ಬೆಂಗಳೂರು: ಮುಂಗಾರು ಮಳೆ ಆರ್ಭಟದಿಂದಾಗಿ ಕೃಷಿ ಚಟುವಟಿಕೆಗಳು ಬಿರುಸಾಗಿ ಸಾಗುತ್ತಿರುವ ನಡುವೆಯೂ ರಾಜ್ಯದಲ್ಲಿ ಮುಂದಿನ 4 ದಿನ ಭಾರಿ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ.

ಉಡುಪಿ, ಉತ್ತರ ಕನ್ನಡದಲ್ಲಿ ಜೂ 9ರಿಂದ ಜೂ 10ರವರೆಗೆ, ಧಾರವಾಡ, ಹಾವೇರಿಯಲ್ಲಿ ಜೂ 10ರಂದು ಅತಿ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್​ ಅಲರ್ಟ್ ಘೋಷಿಸಿದೆ. ಈ ವೇಳೆ 204 ಮಿಮೀ ಮಳೆ ಸುರಿಯುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಗದಗದಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಆರೆಂಜ್​ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಕೊಪ್ಪಳ, ರಾಯಚೂರು, ವಿಜಯಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗದಲ್ಲಿ ಜೂ 9ರಂದು ಯೆಲ್ಲೋ ಅರ್ಲಟ್​ ನೀಡಲಾಗಿದೆ.ದಕ್ಷಿಣ ಕರ್ನಾಟಕ ಭಾಗದ ಎರಡು ಜಿಲ್ಲೆ ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 4 ದಿನ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ.

ದಕ್ಷಿಣ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಗಿಂತ ಉತ್ತರ ಕರ್ನಾಟಕ ಭಾಗದಲ್ಲಿ ಮಾನ್ಸೂನ್​ ಚುರುಕಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 4 ದಿನ ವರುರ್ಣಾಭಟ ಜಾಸ್ತಿ ಇರುವ ಜತೆಗೆ ಗುಡುಗು, ಮಿಂಚು, ಬಿರುಗಾಳಿ ಕಾಣಿಸಿಕೊಳ್ಳಲಿದೆ. ಗಂಟೆಗೆ 40&50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ.

ನೀರಿನ ಮಟ್ಟ ಹೆಚ್ಚಳ

ಭೀಕರ ಬರಗಾಲದಿಂದ ಬರಿದಾಗಿದ್ದ ಕೆಎಸ್​ಆರ್​ಎಸ್​ ಸೇರಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚುತ್ತಿದೆ. ಜತೆಗೆ, ಕೆರೆ&ಗುಂಟೆಗಳಿಗೂ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಣೆಯಾಗುತ್ತಿದ್ದು, ಇದರಿಂದಾಗಿ ಅಂತರ್ಜಲ ಮಟ್ಟವೂ ಹೆಚ್ಚಳವಾಗಿದೆ. ಪೂರ್ವ ಮುಂಗಾರು ವರ್ಷಧಾರೆಯಿಂದ ಕೃಷಿ ಚಟುವಟಿಕೆ ಆರಂಭಿಸಲು ಅನುಕೂಲವಾಗಿತ್ತು. ಜೂ 2ರಿಂದ ಉತ್ತಮವಾಗಿ ಮುಂಗಾರು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೃಷಿ ಚಟುವಟಿಕೆಗಳಿಗೆ ವರದಾನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net