

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಯಲ್ಲಿ ಟೊಯೋಟಾ ಸಂಸ್ಥೆಯಿಂದ ಎರಡು ದಿನಗಳ ನೇಮಕಾತಿ ಶಿಬಿರ ನಡೆಸಿದ್ದು, ವೇಣೂರು ಐಟಿಐ ಮತ್ತು ಆಸುಪಾಸಿನ ಕೆಲವು ಐಟಿಐಗಳ ವಿದ್ಯಾರ್ಥಿಗಳ ಸಹಿತ ಒಟ್ಟು 273 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಲಿಖಿತ ಪರೀಕ್ಷೆ, ಮೌಖಿಕ ಸಂದರ್ಶನ, ದೈಹಿಕ ಆರೋಗ್ಯ ಪರೀಕ್ಷೆ ಮುಂತಾದ ಮೂರು ಹಂತಗಳಲ್ಲಿ ಆಯ್ಕೆ ನಡೆಸಲಾಯಿತು.
ಟೊಯೋಟಾ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ದಯಾನಂದ ಆರ್, ರೋಷನ್, ರುದ್ರ ಹಾಗೂ ತಾಂತ್ರಿಕ ಪರಿಣಿತರನ್ನೊಳಗೊಂಡ ಇನ್ನಿತರ ಅಧಿಕಾರಿಗಳು ಆಯ್ಕೆ ಶಿಬಿರ ನಡೆಸಿದರು.
ಟೊಯೋಟಾ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ದಯಾನಂದ ಆರ್. ಮಾತನಾಡಿ, ಆಧುನಿಕ ಜಗತ್ತಿನಲ್ಲಿ ತಾಂತ್ರಿಕ ಕೌಶಲಕ್ಕೆ ವಿಪರೀತ ಬೇಡಿಕೆ ಇದೆ. ತಾಂತ್ರಿಕ ಕೌಶಲ ಹೊಂದಿರುವ ಯಾವುದೇ ವ್ಯಕ್ತಿಗೆ ಉತ್ತಮ ಭವಿಷ್ಯವಿದೆ. ಕಂಪನಿಗಳಲ್ಲಿ ಇದೀಗ ಮಹಿಳೆಯರನ್ನು ನೇಮಕ ಮಾಡುತ್ತಿದ್ದು, ಐಟಿಐ ಕಲಿತ ಮಹಿಳೆಯರಿಗೆ ಕೂಡಲೇ ಬಹುರಾಷ್ಟ್ರೀಯ ಕಂಪನಿಗಳಲ್ಲಿ ನೌಕರಿ ಸಿಗುವುದು ನಿಶ್ಚಿತ ಎಂದರು.
ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಸ್ವಾಗತಿಸಿದರು. ವೇಣೂರಿನ ಎಸ್‌ಡಿಎಂ ಐಟಿಐ ಹಾಗೂ ಆಸುಪಾಸಿನ ಏಳು ಐಟಿಐ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.