

ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 1,500 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ನ್ಯಾಯಾಲ ಯದ ಆದೇಶದಂತೆ 545 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮರುಪರೀಕ್ಷೆ ನಡೆಸ ಲಾಗುವುದು. ಆನಂತರ ಹೊಸ ನೇಮಕಾತಿ ಮಾಡಲಾಗುವುದು ಎಂದು ವಿವರಿಸಿದರು.
ನೇಮಕಾತಿ ಪರೀಕ್ಷೆ ನಡೆಸುವುದಕ್ಕೆ ಲೋಕಸೇವಾ ಆಯೋಗ, ಪರೀಕ್ಷಾ ಪ್ರಾಧಿಕಾರ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸೇರಿದಂತೆ ಅನೇಕ ಸಂಸ್ಥೆಗಳಿವೆ. ನ್ಯಾಯಾಲಯದ ಆದೇಶ ದೊರೆತ ನಾಲ್ಕೈದು ದಿನಗಳಲ್ಲೇ ಸರ್ಕಾರ ಅಧಿಸೂಚನೆ ಹೊರಡಿಸಿ, ಕರ್ನಾಟಕ ಪರೀಕ್ಷಾ ಪ್ರಾಕಾರದಿಂದ ಪಿಎಸ್ಐ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಅಭ್ಯರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿಳಂಬವಿಲ್ಲದೆ, ಶೀಘ್ರವೇ ಮರು ಪರೀಕ್ಷೆಯಾಗಬೇಕಿದೆ. ನಿಯಮ 32ನ್ನು ಜಾರಿ ಮಾಡಿ 600 ಎಎಸ್ಐಗಳಿಗೆ ಇತ್ತೀಚೆಗೆ ಬಡ್ತಿ ನೀಡಿದ್ದು, ಅವರು ಈಗ ಪಿಎಸ್ಐಗಳಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ಸಾವಿರ ಹಾಗೂ ಹಿಂದಿನ 540 ಸೇರಿ 1540 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕಿದೆ. ಅಭ್ಯರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೇಮಕಾತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪರಮೇಶ್ವರ್ ಹೇಳಿದರು. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಸ್ವಾಭಾವಿಕ. ಅದಕ್ಕಾಗಿ ಇಲಾಖೆಯಲ್ಲಿ ಮಂಡಳಿ ರಚಿಸಲಾಗಿದೆ. ಅನೇಕ ಕಾರಣದಿಂದ ವರ್ಗಾವಣೆಗಳಾಗುತ್ತವೆ. ಅಧಿಕಾರಿಗಳ ಹುದ್ದೆಗಳನ್ನು ಹೆಚ್ಚು ಸಮಯ ಖಾಲಿ ಇಡಲಾಗಲ್ಲ ಎಂದು ಸಚಿವರು ಹೇಳಿದರು.
ಪೊಲೀಸ್ ತರಬೇತಿ ಸಾಮರ್ಥ್ಯ ಹೆಚ್ಚಳ
ಬೇರೆ ಇಲಾಖೆಗಳಂತೆ ನೇಮಕಾತಿಯಾದ ತಕ್ಷಣವೇ ಕೆಲಸಕ್ಕೆ ನಿಯೋಜಿಸಲು ಪೊಲೀಸ್ ಇಲಾಖೆಯಲ್ಲಿ ಸಾಧ್ಯವಿಲ್ಲ. ಒಂದು ವರ್ಷ ತರಬೇತಿ ನೀಡಬೇಕಿದೆ. ಮೈಸೂರಿನಲ್ಲಿರುವ ನಮ್ಮ ತರಬೇತಿ ಸಂಸ್ಥೆಯ ಸಾಮರ್ಥ್ಯ 300 ರಿಂದ 400 ಮಂದಿಯಷ್ಟೆ. ನೇಮಕಾತಿ ಜತೆಗೆ ತರಬೇತಿಯ ಸಾಮರ್ಥ್ಯವನ್ನು ವೃದ್ಧಿಸಬೇಕಾಗಿದೆ ಎಂದು ಪರಮೇಶ್ವರ್ ತಿಳಿಸಿದರು.