More

    ಭಾರತ ವಿಶ್ವಕಪ್​ ಗೆದ್ರೆ 100 ಕೋಟಿ ರೂ. ಹಂಚ್ತೀನಿ! ಆಸ್ಟ್ರೋಟಾಕ್​ ಸಿಇಒ ಬಂಪರ್​ ಘೋಷಣೆ

    ನವದೆಹಲಿ: ನಾಳೆ (ನ.19) ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಭಾರತ ಟ್ರೋಫಿಗಾಗಿ ಕಾದಾಡಲಿದ್ದು, ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತದ ಪಾಲಿಗೆ ನಾಳೆ ಐತಿಹಾಸಿಕ ದಿನವಾಗಲಿದೆ. ಅಲ್ಲದೆ, ನಾಯಕ ರೋಹಿತ್​ ಶರ್ಮ ಜೀವನದಲ್ಲಿ ಎಂದೂ ಮರೆಯದ ಕ್ಷಣವಾಗಲಿದೆ. ವಿಶ್ವಕಪ್​ನಲ್ಲಿ ಒಂದೂ ಪಂದ್ಯವನ್ನೂ ಸೋಲದೆ ಫೈನಲ್​ ತಲುಪಿರುವ ಭಾರತ ಇತಿಹಾಸ ನಿರ್ಮಿಸುವ ಹೊಸ್ತಿಲಿನಲ್ಲಿದ್ದು, ಅಸಖ್ಯಾಂತ ಭಾರತೀಯರು ಭಾರತದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

    ಇದರ ನಡುವೆ ಆಸ್ಟ್ರೋಟಾಕ್​ ಕಂಪನಿ ಸಿಇಒ ಪುನೀತ್​ ಗುಪ್ತ ಅವರು ತಮ್ಮ ಬಳಕೆದಾರರಿಗೆ ಬಂಪರ್​ ಘೋಷಣೆಯೊಂದನ್ನು ಮಾಡಿದ್ದಾರೆ. ಒಂದು ವೇಳೆ ಭಾರತ ವಿಶ್ವಕಪ್​ ಟ್ರೋಫಿ ಜಯಿಸಿದ್ದಲ್ಲಿ ತಮ್ಮ ಬಳಕೆದಾರರಿಗೆ 100 ಕೋಟಿ ರೂಪಾಯಿ ಹಂಚುವುದಾಗಿ ಪುನೀತ್​ ಗುಪ್ತ ಭರವಸೆ ನೀಡಿದ್ದಾರೆ.

    ಇದೇ ಸಂದರ್ಭದಲ್ಲಿ 2011ರ ವಿಶ್ವಕಪ್​ ಟೂರ್ನಿ ಬಗ್ಗೆ ತಮ್ಮ ಲಿಂಕ್​ಡಿನ್​ ಖಾತೆಯಲ್ಲಿ ಬರೆದುಕೊಂಡಿರುವ ಗುಪ್ತ, 2011ರಲ್ಲಿ ಭಾರತ ವಿಶ್ವಕಪ್​ ಗೆದ್ದಂತಹ ಸಂದರ್ಭದಲ್ಲಿ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದೆ ಮತ್ತು ಇದು ನನ್ನ ಜೀವನದ ಅತ್ಯಂತ ಸಂತೋಷದ ದಿನಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಪಂದ್ಯದ ಉತ್ಸಾಹ ಹಾಗೂ ಒತ್ತಡದ ವಾತಾವರಣದ ಬಗ್ಗೆ ಮಾತನಾಡಿರುವ ಗುಪ್ತ, ಪಂದ್ಯದ ಹಿಂದಿನ ದಿನ ನಾವು ರಾತ್ರಿಯಿಡಿ ಮಲಗುತ್ತಿರಲಿಲ್ಲ. ಇಡೀ ದಿನ ಪಂದ್ಯದ ಲೆಕ್ಕಾಚಾರಗಳ ಬಗ್ಗೆ ಚರ್ಚಿಸುತ್ತಿದ್ದೆವು ಎಂದಿದ್ದಾರೆ.

    2011ರಲ್ಲಿ ನಾವು ಪಂದ್ಯವನ್ನು ಗೆದ್ದಾಗ, ನಾನು ದೀರ್ಘಾವಧಿಯವರೆಗೆ ಮೈರೋಮಾಂಚನ ಹೊಂದಿದ್ದೆ. ನನ್ನ ಎಲ್ಲ ಸ್ನೇಹಿತರನ್ನು ಅಪ್ಪಿಕೊಂಡಿದ್ದೆ. ಅದೇ ದಿನ ನಾವು ಚಂಡೀಗಢದಲ್ಲಿ ಬೈಕ್ ರೈಡ್‌ಗೆ ಹೋದೆವು ಮತ್ತು ಅಪರಿಚಿತ ಜನರೊಂದಿಗೆ ಪ್ರತಿ ವೃತ್ತದಲ್ಲಿ ಭಾಂಗ್ರಾ ನೃತ್ಯ ಮಾಡಿದೆವು. ನಾವು ಭೇಟಿಯಾದ ಪ್ರತಿಯೊಬ್ಬರನ್ನು ಅಪ್ಪಿಕೊಳ್ಳುತ್ತಿದ್ದೆವು. ನಿಜವಾಗಿಯೂ ಇದು ನನ್ನ ಜೀವನದ ಸಂತೋಷದಾಯಕ ದಿನಗಳಲ್ಲಿ ಒಂದು ಎಂದು ಗುಪ್ತ ಹೇಳಿದರು.

    ಇದೇ ಸಂದರ್ಭದಲ್ಲಿ ಗುಪ್ತ ಅವರು ಮುಂಬರುವ ವಿಶ್ವಕಪ್‌ಗಾಗಿ ತಮ್ಮ ಯೋಜನೆಗಳನ್ನು ಹಂಚಿಕೊಂಡರು, ಆಸ್ಟ್ರೋಟಾಕ್ ಸಮುದಾಯದ ಜತೆ ಸಂಭ್ರಮಾಚರಣೆ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದರು. ಕಳೆದ ಬಾರಿ ಕೆಲವೇ ಕೆಲವು ಸ್ನೇಹಿತರ ಜತೆ ಮಾತ್ರ ಸಂತೋಷವನ್ನು ಹಂಚಿಕೊಂಡೆವು. ಆದರೆ, ಈ ಬಾರಿ ಸ್ನೇಹಿತರಂತೆ ಇರುವ ಸಾಕಷ್ಟು ಆಸ್ಟ್ರೋಟಾಕ್​ ಬಳಕೆದಾರರಿದ್ದಾರೆ. ಹೀಗಾಗಿ ನನ್ನ ಸಂತೋಷವನ್ನು ಅವರೊಂದಿಗೆ ಹಂಚಿಕೊಳ್ಳಲು ನಾನು ಏನಾದರೂ ಮಾಡಬೇಕಿದೆ ಎಂದರು.

    ಇಂದು ಬೆಳಗ್ಗೆಯಷ್ಟೇ ನನ್ನ ಕಂಪನಿಯ ಹಣಕಾಸು ತಂಡದ ಜತೆ ನಾನು ಮಾತನಾಡಿದೆ ಮತ್ತು ಭಾರತ ಗೆಲುವು ಸಾಧಿಸಿದ್ದಲ್ಲಿ 100 ಕೋಟಿ ರೂಪಾಯಿಯನ್ನು ನಮ್ಮ ಬಳಕೆದಾರರ ವ್ಯಾಲೆಟ್​ಗೆ ಹಾಕುತ್ತೇನೆ ಎಂದು ಗುಪ್ತ ಭರವಸೆ ನೀಡಿದ್ದಾರೆ. ಅಲ್ಲದೆ, ಭಾರತ ಗೆಲ್ಲಲಿ ಎಂದು ಎಲ್ಲರೂ ಪ್ರಾರ್ಥಿಸಿ ಮತ್ತು ಹುರಿದುಂಬಿಸಿ ಎಂದು ಕರೆ ನೀಡಿದ್ದಾರೆ.

    Astrotalk

    ಅಂದಹಾಗೆ ಏಕದಿನ ವಿಶ್ವಕಪ್‌ ಇತಿಹಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. 2003ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದವು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ಸೌರವ್ ಗಂಗೂಲಿ ನಾಯಕತ್ವದ ಭಾರತವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ವಿಶ್ವಕಪ್‌ನಲ್ಲಿ ಭಾರತ ಫೈನಲ್‌ ಪ್ರವೇಶಿಸುತ್ತಿರುವುದು ಇದು ನಾಲ್ಕನೇ ಬಾರಿ. 1983, 2003 ಮತ್ತು 2011 ರಲ್ಲಿ ಫೈನಲ್ ತಲುಪಿದೆ ಮತ್ತು 1983 ಮತ್ತು 2011 ರಲ್ಲಿ ಪ್ರಶಸ್ತಿಯನ್ನು ಗೆದ್ದಿದೆ.

    ಭಾರತ ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಲೀಗ್​ ಹಂತದಲ್ಲಿ 9 ಮತ್ತು ಒಂದು ಸೆಮಿಫೈನಲ್​ ಸೇರಿ ಆಡಿದ 10 ಪಂದ್ಯಗಳಲ್ಲೂ ಜಯ ಸಾಧಿಸಿದೆ. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 10 ಪಂದ್ಯಗಳಲ್ಲಿ ಎರಡರಲ್ಲಿ ಸೋತು ಉಳಿದ ಎಂಟು ಪಂದ್ಯಗಳಲ್ಲಿ ಜಯಸಿದೆ. ಅ.8ರಂದು ಚೆನ್ನೈ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಲೀಗ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತು. ಇದೀಗ ನಾಳೆ (ನ.19) ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಟ್ರೋಫಿ ಯಾರ ಪಾಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಭಾರತ ಗೆಲ್ಲಲಿ ಎಂದು ನಾವೆಲ್ಲರು ಪ್ರಾರ್ಥಿಸೋಣ. (ಏಜೆನ್ಸೀಸ್​)

    ವಿಶ್ವಕಪ್​ ಫೈನಲ್ ಪಂದ್ಯ​ ವೀಕ್ಷಿಸದಂತೆ ಬಚ್ಚನ್​​ ಬಳಿ ಬೇಡಿಕೊಂಡ ಫ್ಯಾನ್ಸ್​! ವಿಚಿತ್ರ ಕಾರಣ ಹೀಗಿದೆ…

    ರಾಹುಲ್​ ದ್ರಾವಿಡ್​ಗೆ ಕಾದಿದೆ ಟೀಮ್​ ಇಂಡಿಯಾ ಸರ್ಪ್ರೈಸ್​ ಗಿಫ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts