ಕೈ ಬರಹ ಮೂಲಕ ಕುರಾನ್ ಬರೆದ ವಿದ್ಯಾರ್ಥಿನಿ : ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ದಾಖಲೆ

New Project (5)
Published on

ಪುತ್ತೂರು ಗ್ರಾಮಾಂತರ: ಪವಿತ್ರ ಕುರಾನ್ ಗ್ರಂಥವನ್ನು ಕೈ ಬರಹದ ಮೂಲಕ ಮಸಿ ಅದ್ದಿ ಕಲಂನಿಂದ ಬರೆದು ದಾಖಲೆ ಮಾಡಿದ್ದ ಪುತ್ತೂರು ತಾಲೂಕಿನ ಕುಂಬ್ರ ಮರ್ಕಝ್ ಪದವಿ ವಿಭಾಗದ ವಿದ್ಯಾರ್ಥಿನಿ ಸಜ್ಲಾ ಇಸ್ಮಾಯಿಲ್ ಬೈತಡ್ಕ ಇದೀಗ ಇಂಡಿಯಾ ಬುಕ್ ಆ್ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆದು ಐಬಿಆರ್ ಅಚೀವರ್ ಪ್ರಶಸ್ತಿ ಪಡೆದಿದ್ದಾರೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಜ್ಲಾ ಅವರ ಅಸಾಮಾನ್ಯ ಸಾಧನೆ ಗುರುತಿಸಿ ಪದಕ, ಪ್ರಶಸ್ತಿ ನೀಡಿ ಗೌರವಿಸಿದೆ. 604 ಪುಟಗಳಲ್ಲಿ ಕುರಾನ್‌ನ 114 ಕಾಂಡಗಳನ್ನು 2,416 ತಾಸುಗಳನ್ನು ವ್ಯಯಿಸಿ 15 ಬಾಟಲಿ ಇಂಕ್, 152 ಚಾರ್ಟ್ ಪೇಪರ್, 102 ಎರೇಸರ್ ಬಳಸಿಕೊಂಡು ಬರೆದಿದ್ದು ಕಳೆದ ಆಗಸ್ಟ್‌ನಲ್ಲಿ ಇದರ ಲೋಕಾರ್ಪಣೆ ಕಾರ್ಯಕ್ರಮ ಕುಂಬ್ರ ಮರ್ಕಝ್ ಕ್ಯಾಂಪಸ್‌ನಲ್ಲಿ ನಡೆದಿತ್ತು. ಇದು ವ್ಯಾಪಕ ಪ್ರಚಾರ ಪಡೆದಿತ್ತು.

ಪ್ರಪಂಚದಲ್ಲಿ ಕೆಲವರು ಮಾತ್ರ ಕೈ ಬರಹದಲ್ಲಿ ಕುರಾನ್ ಬರೆದಿದ್ದರೂ ಮಸಿ ಅದ್ದಿ ಕಲಂ ಮೂಲಕ ಕುರಾನ್ ಬರೆದ ಏಕೈಕ ವಿದ್ಯಾರ್ಥಿನಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸಜ್ಲಾ ಹೆಸರು ನೋಂದಾಯಿಸಲ್ಪಟ್ಟಿತ್ತು. ಏಷ್ಯನ್ ಬುಕ್ ಆ್ ರೆಕಾರ್ಡ್, ಲಿಮ್ಕಾ ದಾಖಲೆ, ಗಿನ್ನಿಸ್ ದಾಖಲೆಗಳಿಗೆ ಮುಂದೆ ದಾಖಲಾಗಲು ದಾಖಲಾತಿ ಹಂತ ಪ್ರಗತಿಯಲ್ಲಿದೆ. ಈಕೆ ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್ ಸ್ಥಾಪಕ ಕಾರ್ಯದರ್ಶಿ ಇಸ್ಮಾಯಿಲ್ ಬೈತಡ್ಕ ಹಾಗೂ ಝಹ್ ರಾ ಜಾಸ್ಮಿನ್ ದಂಪತಿ ಪುತ್ರಿ. ಈ ಸಾಧನೆ ಅರಬ್ ದೇಶಗಳಲ್ಲೂ ವ್ಯಾಪಕ ಪ್ರಚಾರ ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net