

ಹಾನಗಲ್ಲ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕುರಿತು ಹಾನಗಲ್ಲ, ಅಕ್ಕಿಆಲೂರ, ಬೊಮ್ಮನಹಳ್ಳಿ ಹೋಬಳಿಯ ಮೇಲ್ವಿಚಾರಕರು ಹಾಗೂ ಖಾಸಗಿ ನಿವಾಸಿಗಳಿಗೆ ತಾಲೂಕು ಮಟ್ಟದ ತರಬೇತಿ ಕಾರ್ಯಾಗಾರ ನಡೆಯಿತು.
ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಕೆ. ಮೋಹನಕುಮಾರ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಮುಕ್ತಾಯಗೊಂಡಿದೆ. ಪ್ರಸಕ್ತ ವರ್ಷ ತಾಲೂಕಿನಲ್ಲಿ 59,594 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರ ಜತೆಗೆ ಮುಂಗಾರು ಹಂಗಾಮಿನಲ್ಲಿ ಒಟ್ಟು 82,654 ಸರ್ವೆ ನಂಬರ್ಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಳಿಸಬೇಕಾಗಿದ್ದು, ಬೆಳೆ ವಿಮೆ ಮಾಡಿಸಿದ ರೈತರು, ರೈತರ ಬೆಳೆ ಸಮೀಕ್ಷೆ ಮೊಬೈಲ್ ಆಪ್ನಲ್ಲಿ ಹಾಗೂ ಸ್ಥಳೀಯವಾಗಿ ನೇಮಕಗೊಂಡ ಖಾಸಗಿ ನಿವಾಸಿಗಳು ಪಿಆರ್ ಆಪ್ನಲ್ಲಿ ಬೆಳೆ ಸಮೀಕ್ಷೆಯನ್ನು ದಾಖಲಿಸುವಂತೆ ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ಮಾತನಾಡಿ, ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯ ಸಂದರ್ಭದಲ್ಲಿ ಖಾಸಗಿ ನಿವಾಸಿಗಳು ಆಯಾ ಗ್ರಾಮದ ರೈತರಿಗೆ ಸರ್ವೆ ಕೈಗೊಳ್ಳುತ್ತಿರುವ ಕುರಿತು ತಿಳಿಸಿ, ಫಲಾನುಭವಿಯೂ ಸರ್ವೆ ಸಂದರ್ಭದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಂದಾಯ ಇಲಾಖೆಯ ಶಿರಸ್ತೇದಾರ ಬಸವರಾಜ ಅಂಗಡಿ ಮಾತನಾಡಿ, ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯಲ್ಲಿ ಆಯಾ ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಹೆಚ್ಚು ಕಾಳಜಿ ವಹಿಸಿ ಸಮೀಕ್ಷೆ ಕೈಗೊಳ್ಳುವ ಖಾಸಗಿ ನಿವಾಸಿಗಳಿಗೆ ಸಹಕಾರ ನೀಡಬೇಕು ಎಂದು ಸೂಚಿಸಿದರು.
ಕೃಷಿ ಇಲಾಖೆಯ ಮಾಸ್ಟರ್ ಟ್ರೈನರ್ ಸಂಗಮೇಶ ಹಕ್ಕಲಪ್ಪನವರ ಮಾತನಾಡಿ, ಬೆಳೆ ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ಸರ್ಕಾರದ ವಿವಿಧ ಯೋಜನೆಗಳಾದ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಅಡಿಯಲ್ಲಿ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ನೀಡುವ ಬೆಳೆ ನಷ್ಟ ಪರಿಹಾರ ವಿತರಿಸಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಬೆಳೆವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಸಾಂಖಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿ ತಯಾರಿಸಲು, ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕೆ ಬಳಸಿಕೊಳ್ಳಲಾಗುತ್ತದೆ. ಖಾಸಗಿ ನಿವಾಸಿಗಳು ಹಾಗೂ ಮೇಲ್ವಿಚಾರಕರಿಗೆ ಬೆಳೆ ಸಮೀಕ್ಷೆಯಲ್ಲಿನ ತಾಂತ್ರಿಕ ಮಾಹಿತಿ ಹಾಗೂ ಅನುಮೋದನೆ ಕುರಿತು ಮಾಹಿತಿಯನ್ನು ನೀಡಿದರು.
ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ರೈತರ ಬೆಳೆ ಸಮೀಕ್ಷೆಯ ಭಿತ್ತಿಚಿತ್ರಗಳನ್ನು ಬಿಡುಗಡೆಗೊಳಿಸಿದರು.