

*ಶೇ.90ರ ಆಸುಪಾಸಿಗೆ ಮತದಾನ ಪ್ರಮಾಣ
*ಅಭ್ಯರ್ಥಿಗಳಲ್ಲಿ ಭವಿಷ್ಯದ ಗೊಂದಲ
ಗಂಗಾಧರ್ ಬೈರಾಪಟ್ಟಣ ರಾಮನಗರ
ಕಳೆದ 20 ದಿನಗಳಿಂದಲೂ ಉಪಚುನಾವಣೆ ಕಾವಿನಲ್ಲಿ ಬೆಂದಿದ್ದ ಚನ್ನಪಟ್ಟಣಕ್ಕೆ ಗುರುವಾರ ಬಿರುಸಿನ ಮಳೆಯಾಗಿ ತಂಪೆರೆದಿದೆ.
ಮತದಾನ ಮುಗಿದು ಮತ ಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಸೇಫ್ ಆಗಿ ಸ್ಟ್ರಾಂಗ್ ರೂಂ ಸೇರಿಯೂ ಆಗಿದೆ. ಈಗ ಗೆಲುವು ಯಾರಿಗೆ ಎನ್ನುವ ಬಿಸಿಬಿಸಿ ಚರ್ಚೆ ಕ್ಷೇತ್ರದ ತುಂಬೆಲ್ಲ ವ್ಯಾಪಿಸಿದ್ದು, ಸೋಲು&ಗೆಲುವಿನ ದೊಡ್ಡ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಇದಕ್ಕೆ ಕಾರಣವಾಗಿದ್ದು, ಕ್ಷೇತ್ರದಲ್ಲಿ ಈ ಬಾರಿ ದಾಖಲೆಯ ಮತದಾನವಾಗಿದೆ. ಹಿಂದಿನ ಎಲ್ಲ ಚುನಾವಣೆಗಳನ್ನು ಅವಲೋಕಿಸಿದಾಗಿ ಈ ಬಾರಿ ಶೇ.90ರ ಆಸುಪಾಸಿಗೆ ಮತದಾನ ಪ್ರಮಾಣ ತಲುಪಿರುವುದು ರಾಜಕೀಯ ನಾಯಕರು ಗೆಲುವಿನ ಗಣಿತದಲ್ಲಿ ತೊಡಗಿಕೊಳ್ಳುವಂತೆ ಮಾಡಿದೆ.
1952ರಿಂದ ಚನ್ನಪಟ್ಟಣ ವಿಧಾನಸಭೆಗೆ ಈ ಚುನಾವಣೆಯೂ ಸೇರಿ 3 ಉಪ ಚುನಾವಣೆಗಳು ಹಾಗೂ 16 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ಆದರೆ, ಬುಧವಾರ ನಡೆದ ಮತದಾನ ಹಿಂದಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿ ಮೊದಲ ಬಾರಿಗೆ ಶೇ 88.81 ಮತದಾನವನ್ನು ದಾಖಲು ಮಾಡಿದೆ.
2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.86.86 ಮತದಾನವಾಗಿದ್ದೇ ದಾಖಲೆಯಾಗಿತ್ತು. ಇದನ್ನು ಹೊರತುಪಡಿಸಿ ಶೇ.80ರ ಗಡಿದಾಟಿದ ಚುನಾವಣೆಗಳೆಂದರೆ 1978ರಲ್ಲಿ ಶೇ.80.30, 1994ರಲ್ಲಿ ಶೇ.81.52, 2013ರ ಚುನಾವಣೆಯಲ್ಲಿ ಶೇ.84.78 ಮತ್ತು ಕಳೆದ 2023ರ ಚುನಾವಣೆಯಲ್ಲಿ ಶೇ.85.86 ಮತದಾನವಾಗಿತ್ತು.
ಈ ಬಾರಿ ದಾಖಲೆ ಮಾತದಾನವಾಗಿರುವುದು ಯಾರಿಗೆ ಲಾಭ ಎನ್ನುವ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಹೆಚ್ಚು ಮತದಾನವಾಗಿದೆಯೇ, ಇಲ್ಲ ನಗರ ಪ್ರದೇಶದಲ್ಲಿ ಹೆಚ್ಚು ಮತದಾನವಾಗಿದೆಯೇ ಎನ್ನುವ ಬಗ್ಗೆ ಕಾರ್ಯಕರ್ತರಿಗೆ ಖಾತ್ರಿ ಇಲ್ಲದ ಕಾರಣ ತಮ್ಮದೇ ವ್ಯಾಖ್ಯಾನ ನೀಡುವ ಮೂಲಕ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. 276 ಬೂತ್ಗಳಲ್ಲಿ 100ಕ್ಕೂ ಹೆಚ್ಚು ಬೂತ್ಗಳಲ್ಲಿ ಮತದಾನದ ಪ್ರಮಾಣ ಶೇ.90ರಿಂದ 97ರವರೆಗೂ ದಾಟಿದೆ. ಇದರ ಜತೆಗೆ ಮಹಿಳಾ ಮತಗಳ ಪ್ರಮಾಣವೂ ಹೆಚ್ಚಳವಾಗಿರುವ ಕಾರಣ, ಇವರ ಆಶೀರ್ವಾದ ಯಾರಿಗೆ ದಕ್ಕಿದೆ ಎನ್ನುವ ಚರ್ಚೆಯೂ ನಡೆದಿದೆ.
ರಾಜಕೀಯ ಪಕ್ಷದ ಮುಖಂಡರು ಮತದಾನ ಪ್ರಮಾಣ ಹೆಚ್ಚಳ ಸಂಬಂಧ ಗೆಲುವು ತಮ್ಮದೇ ಎಂದು ಬೀಗುತ್ತಿದ್ದಾರೆ. ಒಂದೆಡೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಲಿತಾಂಶ ಕಷ್ಟವಾಗಿದೆ ಎಂದು ಹೇಳುತ್ತಿದ್ದರೂ ಗೆಲುವು ತಮ್ಮದೆ ಎಂದು ಹಿನ್ನೆಲೆಯಲ್ಲಿ ಬೀಗುತ್ತಿದ್ದಾರೆ. ಅದೇರೀತಿ ಎನ್ಡಿಎ ಅಭ್ಯರ್ಥಿ ನಿಖಿಲ್ ಸಹ ಗೆಲುವು ನಮ್ಮದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದರೂ ಒಳಗೊಳಗೇ ಗೆಲುವಿನ ಬಗ್ಗೆ ಗೊಂದಲ ನಿರ್ಮಾಣವಾಗಿದೆ.
ಮತದಾನ ಪ್ರಮಾಣ ಹೆಚ್ಚಾಗಿರುವ ಕಾರಣ ಲಿತಾಂಶದ ಮೇಲೆ ಬೆಟ್ಟಿಂಗ್ ಕಟ್ಟುವ ಬಾಜೀದಾರರೂ ಸಾವಿರ ಬಾರಿ ಯೋಚಿಸಿ ಮುನ್ನಡಿ ಇಡುವಂತೆ ಮಾಡಿದೆ. ಸಾಧ್ಯವಿರುವ ಎಲ್ಲ ಮೂಲಗಳಿಂದ ಮಾಹಿತಿ ಸಂಗ್ರಹಿಸುವ ಕೆಲಸ ಬಾಜೀದಾರರು ಮಾಡುತ್ತಿದ್ದು ಇನ್ನು ಎರಡು ಮೂರು ದಿನಗಳ ನಂತರ ಕ್ಷೇತ್ರದ ಲಿತಾಂಶದ ಮೇಲಿನ ಬಾಜಿ ತೇಜಿಯಾಗಲಿದೆ.
ಹಿಂದಿನ ವಿಧಾನಸಭೆ ಚುನಾವಣೆ ಶೇಖಡವಾರು
ವರ್ಷ ಮತದಾರರು ಹಕ್ಕುಚಲಾವಣೆ ಶೇಖಡಾವರು
1957 46135 32778 71.05
1962 50064 39850 79.60
1967 67164 51537 76.73
1972 84839 54475 64.21
1978 89067 71522 80.30
1983 96068 71522 74.74
1985 112183 86911 77.47
1989 131553 104455 79.40
1994 143702 117175 82.52
1999 159659 116429 72.92
2004 168502 120490 71.50
2008 183793 143627 78.15
2013 19876 1 168515 84.78
2018 217606 189013 86.86
2023 230381 197796 85.86
ಹಿಂದಿನ ಎರಡು ಉಪಚುನಾವಣೆ ಮತದಾನದ ಶೇಖಡವಾರು
ವರ್ಷ ಮತದಾರರು ಹಕ್ಕುಚಲಾವಣೆ ಶೇಖಡವಾರು
2009 186669 147665 79.10
2011 188399 148769 78.96