

ಬೇಲೂರು: ಏಪ್ರಿಲ್ 20ರಂದು ನಡೆಯಲಿರುವ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ಸಂದರ್ಭ ಮುಸ್ಲಿಂ ಧರ್ಮ ಗುರುವಿನಿಂದ ಕುರ್‌ಅನ್ ಪಠಣಕ್ಕೆ ಅವಕಾಶ ನೀಡಬಾರದು ಎಂದು ಚನ್ನಕೇಶವಸ್ವಾಮಿ ದೇಗುಲ ಹಿತರಕ್ಷಣಾ ಸಮಿತಿ ಮುಖಂಡರು ಗುರುವಾರ ಕಚೇರಿಯ ಶಿರಸ್ತೇದಾರ್ ರಂಗಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಹಿಂದು ಧಾರ್ಮಿಕ ವಿಧಿ-ವಿಧಾನಗಳಂತೆ ಪೂಜೆ, ಹೋಮ, ಹವನ ನಡೆಯಬೇಕು. ಈ ದೇವಸ್ಥಾನ ಧರ್ಮಾದಾಯ ದತ್ತಿ ಸಂಸ್ಥೆ ಅಧೀನಕ್ಕೆ ಒಳಪಟ್ಟಿದೆ. ನಿಯಾಮಾನುಸಾರ ಯಾವುದೇ ಅನ್ಯ ಧರ್ಮೀಯ ಚಟುವಟಿಕೆ, ಆರಾಧನೆ ಮಾಡಬಾರದು. ಆದ್ದರಿಂದ ಖಾಜಿ ಕುಟುಂಬದ ಸದಸ್ಯರು ಕುರ್‌ಅನ್ ಪಠಣ ಮಾಡದಂತೆ ಕ್ರಮವಹಿಸಬೇಕು ಎಂದು ಕೋರಿದರು.
ಮ್ಯಾನ್ಯುಯಲ್ ಕೈಪಿಡಿಯಲ್ಲಿ ರಥೋತ್ಸವ ದಿನದಂದು ಮೇದೂರು ಖಾಜಿ ಸಾಹೇಬರ ಕುಟುಂಬದವರಿಗೆ ಮರ್ಯಾದೆ ಮತ್ತು ಧಾನ್ಯ ಕಾಣಿಕೆ ನೀಡಬೇಕು ಎಂಬ ಉಲ್ಲೇಖವಿದೆ. ರಥದ ಮುಂದೆ ಕುರ್‌ಅನ್ ಪಠಣ ಮಾಡಬೇಕೆಂದು ಎಲ್ಲೂ ಉಲ್ಲೇಖವಿಲ್ಲ. ಪಠಣ ಮಾಡುತ್ತಿರುವುದು ನಿಯಮ ಉಲ್ಲಂಘನೆ ಹಾಗೂ ದೇವರಿಗೆ ಮಾಡುತ್ತಿರುವ ಅವಮಾನವಾಗಿದೆ. ಜತೆಗೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ. ಆದ್ದರಿಂದ ಶಾಶ್ವತವಾಗಿ ನಿಲ್ಲಿಸಬೇಕು ಎಂದು ದೇಗುಲ ಹಿತರಕ್ಷಣಾ ಸಮಿತಿ ಮುಖಂಡರಾದ ಕೃಷ್ಣೇಗೌಡ, ಮಂಜು, ದೀಕ್ಷಿತ್, ರಾಜೇಶ್, ದೀವಿತ್ ಮನವಿ ಮಾಡಿದರು.