

ವಿಜಯವಾಣಿ ಸುದ್ದಿಜಾಲ ಮಂಗಳೂರು: ಬೇರೆಯವರೊಂದಿಗೆ ತುಲನೆ ಮಾಡಿಕೊಳ್ಳುವ ಬದಲು ನಮ್ಮ ಏಳಿಗೆಗೆ ನಾವೇ ಕಾರಣೀಭೂತರಾಗುವ ಆತ್ಮವಿಶ್ವಾಸ ಹೊಂದಬೇಕು. ಉನ್ನತ ಕನಸು ಕಂಡು ಅದನ್ನು ಸಾಕಾರಗೊಳಿಸುವ ಚಿಂತನೆಯೊಂದಿಗೆ ಸಾಧಕರಾಗಬೇಕು ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ.ಎ. ನಂದಗೋಪಾಲ ಶೆಣೈ ಹೇಳಿದರು.
ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆಧ್ಯ ಗೌಡ್ ಬ್ರಾಹ್ಮಣ ಸಂಘ ಮತ್ತು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ವತಿಯಿಂದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪ್ರೇರಣಾ-2024 ಚಟುವಟಿಕೆ ಆಧಾರಿತಾ ವ್ಯಕ್ತಿತ್ವ ವಿಕಸನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ತರಬೇತುದಾರರಾದ ಪುತ್ತೂರಿನ ಕೃಷ್ಣ ಮೋಹನ ಪಿ.ಎಸ್., ಪಶುಪತಿ ಶರ್ಮಾ ಕೆ., ಸತೀಶ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಕೇಂದ್ರದ ಕಾರ್ಯದರ್ಶಿ ಡಾ.ಮೋಹನ್ ಪೈ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕುಡಾಳ್ ದೇಶಸ್ಥ ಆಧ್ಯ ಗೌಡ್ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಕೂಡಿಬೈಲು ಶ್ರೀನಿವಾಸ ಶೆಣೈ, ಕಾರ್ಯದರ್ಶಿ ದಯಾನಂದ ನಾಯಕ್, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿಜಯ ಶೆಣೈ ಕೊಡಂಗೆ, ಕಾರ್ಯದರ್ಶಿ ಮುರಲೀಧರ ಪ್ರಭು ವಗ್ಗ, ಕೇಂದ್ರದ ಕೋಶಾಧಿಕಾರಿ ಬಿ.ಆರ್.ಭಟ್, ಸಿಎಒ ಡಾ.ಬಿ.ದೇವದಾಸ ಪೈ ಉಪಸ್ಥಿತರಿದ್ದರು.
ಕಾರ್ಯಕ್ರಮ ಪ್ರಾಯೋಜಕರಾದ ಕೇಂದ್ರದ ಟ್ರಸ್ಟಿ ಡಿ.ರಮೇಶ ನಾಯಕ್ ಸ್ವಾಗತಿಸಿದರು. ವಿಜಯಲಕ್ಷ್ಮೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು.