

ಬೆಂಗಳೂರು: ವಿಧಾನಸಭೆ ಚುನಾವಣೆ ಎದುರಿಸಲು ಪಕ್ಷ ಸಿದ್ಧವಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲಿದೆ. ಮಾದರಿ ನೀತಿ ಸಂಹಿತೆ ಪಾಲನೆಗೆ ಬದ್ಧವಾಗಿದ್ದು, ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಪೂರ್ವ ನಿಗದಿತ ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಏ.9ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಅದೊಂದೇ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೇರೆ ಯಾವುದೇ ಕಾರ್ಯಕ್ರಮಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ವಿವಿಧ ಹಂತದ ಪ್ರಚಾರ ತಂತ್ರ
ಚುನಾವಣೆ ಪೂರ್ವ ಸಿದ್ಧತಾ ಚಟುವಟಿಕೆ, ಕಾರ್ಯಕ್ರಮಗಳ ಮೂಲಕ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಪ್ರತಿ ಮನೆಗೆ ಎರಡು ಬಾರಿ ತಲುಪಿದ್ದು, ಸರ್ಕಾರದ ಸಾಧನೆ, ಯೋಜನೆಗಳನ್ನು ವಿವರಿಸಿದ್ದಾರೆ. ಚುನಾವಣಾ ಪ್ರಚಾರ ತಂತ್ರವು ಮೂರು ಹಂತದಲ್ಲಿರಲಿದೆ. ಡಿಜಿಟಲ್ ಯುಗಕ್ಕೆ ತಕ್ಕಂತೆ ಪ್ರಚಾರ ಕಾರ್ಯಕ್ಕೆ ಡಿಜಿಟಿಲೀಕರಣ ಸ್ಪರ್ಶವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ನಾಯಕರು ಬೂತ್ ಮತ್ತು ವಿಧಾನಸಭೆ ಕ್ಷೇತ್ರ, ರಾಜ್ಯಮಟ್ಟದ ನಾಯಕರು ಜಿಲ್ಲಾಮಟ್ಟ ಹಾಗೂ ರಾಷ್ಟ್ರೀಯ ನಾಯಕರು ರಾಜ್ಯಮಟ್ಟದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.